ಯುವ ಪತ್ರಕರ್ತ ಚರಣ್‌ಗೆ ಒಲಿದ ‘ನ್ಯಾಷನಲ್ ಗ್ಲೋಬಲ್ ಅವಾರ್ಡ್’

Addaheading 20261005 090219 0000 ಯುವ ಪತ್ರಕರ್ತ ಚರಣ್‌ಗೆ ಒಲಿದ ‘ನ್ಯಾಷನಲ್ ಗ್ಲೋಬಲ್ ಅವಾರ್ಡ್’
Spread the love

ಹೊಸನಗರ: ಪತ್ರಿಕೋದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯುವ ಪತ್ರಕರ್ತ ಚರಣ್ ಅವರಿಗೆ ಪ್ರತಿಷ್ಠಿತ ‘ನ್ಯಾಷನಲ್ ಗ್ಲೋಬಲ್ ಅವಾರ್ಡ್’ ಲಭಿಸಿದೆ.

ಶ್ರೀನಿಧಿ ಫೌಂಡೇಷನ್ (ರಿ), ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಷನ್ (ರಿ), ಧಾರವಾಡ ಇವರ ಸಂಯೋಗದಲ್ಲಿ ಗೋವಾದ ರವೀಂದ್ರ ಭವನ, ವಾಸ್ಕೋದಲ್ಲಿ ಆಯೋಜಿಸಿದ್ದ ‘ಕನ್ನಡ ಸಾಂಸ್ಕೃತಿಕ ಸಮ್ಮೇಳನ ಗೋವಾ-2026’ರ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚರಣ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು.

ಹೊಸನಗರ ತಾಲೂಕಿನ ಜೇನಿ ಗ್ರಾಮದ ಮಣ್ಣನಕೊಪ್ಪದ ಬಿ. ಲಿಂಗರಾಜು ಹಾಗೂ ಶೋಭಾ ದಂಪತಿ ಪುತ್ರರಾದ ಚರಣ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಜರ್ನಲಿಸಂ, ಮಾಸ್ ಕಮ್ಯುನಿಕೇಶನ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಬಿ.ಎ. ಪದವಿ ಪಡೆದಿದ್ದಾರೆ.

ಕಿರಿಯ ವಯಸ್ಸಿನಲ್ಲಿಯೇ ಮಾಧ್ಯಮ ಸಂಸ್ಥೆಯ ಮೂಲಕ ಚರಣ್, ಯುವ ಪತ್ರಕರ್ತರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

  ತಮ್ಮ ಡಿಜಿಟಲ್ ಮಾಧ್ಯಮದ ಮೂಲಕ ಮಲೆನಾಡು ಹಾಗೂ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗಗಳ ಸಮಸ್ಯೆಗಳು, ಶೈಕ್ಷಣಿಕ ವಿಚಾರಗಳು, ಆಡಳಿತಾತ್ಮಕ ವಿಷಯಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ನಿರಂತರವಾಗಿ ಧ್ವನಿಯಾಗುತ್ತಿದ್ದಾರೆ. ಇದರೊಂದಿಗೆ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ತಮ್ಮ  ಮಾಧ್ಯಮ ಸಂಸ್ಥೆಯ ವತಿಯಿಂದ ಪ್ರತಿ ಭಾನುವಾರ ವಿಶೇಷ ಸಾಹಿತ್ಯಿಕ ಸಂಚಿಕೆಯನ್ನು ನಡೆಸಲಾಗುತ್ತಿದ್ದು, ಪ್ರಮುಖ ಸಾಹಿತಿಗಳು ಹಾಗೂ ಉದಯೋನ್ಮುಖ ವಿದ್ಯಾರ್ಥಿ ಬರಹಗಾರರ ಲೇಖನಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಚರಣ್ ಅವರಿಗೆ ಈ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಹಿತೈಷಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಚರಣ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇವರ ಶ್ರಮಕ್ಕೆ ಲಭಿಸಿದ ಈ ಸಾಧನೆಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು

Leave a Reply

Your email address will not be published. Required fields are marked *

error: Content is protected !!