ತೀರ್ಥಹಳ್ಳಿ: ಕಸ್ತೂರಿರಂಗನ್ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ತೀರ್ಥಹಳ್ಳಿಗೆ ಭೇಟಿ ನೀಡುತ್ತಿದ್ದು, ನಾಯಕರ ಈ ದಿಢೀರ್ ಭೇಟಿಯ ಫಲವಾಗಿ ಕಳೆದ ಮೂರು ವರ್ಷಗಳಿಂದ ಗುಂಡಿ ಬಿದ್ದಿದ್ದ ಪಟ್ಟಣದ ಪ್ರಮುಖ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಶುಕ್ರವಾರ ಪಟ್ಟಣ ಪಂಚಾಯಿತಿ ವತಿಯಿಂದ ತರಾತುರಿಯಲ್ಲಿ ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಈ ರಸ್ತೆಯು ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಆಡಳಿತವೇ ಇದ್ದರೂ ಸ್ಥಳೀಯರ ಹಲವು ಮನವಿ, ದೂರುಗಳಿಗೆ ಆಡಳಿತ ಕಿವಿಗೊಟ್ಟಿರಲಿಲ್ಲ ಎಂಬ ಆಕ್ರೋಶ ಸಾರ್ವಜನಿಕರಲ್ಲಿದೆ.
ಆದರೆ ಮುಖ್ಯಮಂತ್ರಿಗಳ ಭೇಟಿಯ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ, ರಾತ್ರೋರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಿ ತರಾತುರಿಯಲ್ಲಿ ಡಾಂಬರು ಹಾಕಿಸುವ ಕಾಮಗಾರಿಯಲ್ಲಿ ನಿರತವಾಗಿದೆ.
‘ಡಿ.ಕೆ. ಶಿವಕುಮಾರ್ ರಸ್ತೆ’ ಎಂದು ಹೆಸರಿಡಲು ಜನರ ವ್ಯಂಗ್ಯ
ನಾಯಕರ ಭೇಟಿಗಾಗಿ ಕೇವಲ ಒಂದೇ ದಿನ ಮುಂಚಿತವಾಗಿ ನಡೆಯುತ್ತಿರುವ ಈ ಕಾಮಗಾರಿಯನ್ನು ಕಂಡು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮೂರು ವರ್ಷಗಳಿಂದ ಮನವಿ ಮಾಡಿದರೂ ನಮಗೆ ಸಿಗದ ರಸ್ತೆ ಭಾಗ್ಯ, ಡಿ.ಕೆ. ಶಿವಕುಮಾರ್ ಅವರ ಒಂದು ಭೇಟಿಯಿಂದಾಗಿ ರಾತ್ರೋರಾತ್ರಿ ಸಿಕ್ಕಿದೆ.
ಸ್ಥಳೀಯ ಆಡಳಿತಕ್ಕೆ ಸಾರ್ವಜನಿಕರ ಸಂಕಷ್ಟಕ್ಕಿಂತ ನಾಯಕರ ಓಲೈಕೆಯೇ ಮುಖ್ಯವಾಯಿತು. ಆದ್ದರಿಂದ ಈ ರಸ್ತೆಗೆ ‘ಡಿ.ಕೆ. ಶಿವಕುಮಾರ್ ರಸ್ತೆ’ ಎಂದೇ ನಾಮಕರಣ ಮಾಡುವುದು ಸೂಕ್ತ” ಎಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ.















Leave a Reply