
ತೀರ್ಥಹಳ್ಳಿ: ಅಕ್ರಮವಾಗಿ ನಾಡ ಬಂದೂಕು (Country-made Gun) ತಯಾರಿಸುತ್ತಿದ್ದ ಆರೋಪದ ಮೇರೆಗೆ ತೀರ್ಥಹಳ್ಳಿ ತಾಲೂಕಿನ ಅಕ್ಲಾಪುರ ಗ್ರಾಮದಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಒಂದು ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಅಕ್ಲಾಪುರ ಗ್ರಾಮದ ನಿವಾಸಿ ಸುಧಾಕರ ಆಚಾರಿ (56) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಆರೋಪಿಯ ವಶದಲ್ಲಿದ್ದ ಒಂದು ನಾಡ ಬಂದೂಕನ್ನು ಪೊಲೀಸರು ಜಪ್ತಿ ಮಾಡಿದ್ದು, ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಹಾಗೂ ಹೊಂದಿಕೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಕಾಯ್ದೆ (Arms Act) ಕಲಂ 3, 5 ಹಾಗೂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಆರೋಪಿಯು ಬಂದೂಕು ತಯಾರಿಕೆ ನಡೆಸುತ್ತಿದ್ದ ಉದ್ದೇಶ ಹಾಗೂ ಅದರ ಬಳಕೆಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್ಪೆಕ್ಟರ್ ಆರ್. ಸುಷ್ಮಾ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಗಳಾದ ಲಿಂಗೇಗೌಡ, ಪ್ರವೀಣ್ ಕುಮಾರ್, ಪರಮೇಶ್ ನಾಯ್ಕ್, ದೀಪಕ್, ದೀಪಕ್ ಕೆ.ಪಿ., ಪ್ರಮೋದ್ ಜಿ., ರಾಘವೇಂದ್ರ ಹಾಗೂ ಮೋಹನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.















Leave a Reply