ಹೊಸನಗರ: ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ರ್ಯಾಂಕ್ಸ್ ಇನ್ಸ್ಟಿಟ್ಯೂಟ್, ಹೊಸನಗರ ಹಾಗೂ ಜೆಸಿಐ ಹೊಸನಗರ ಡೈಮಂಡ್ ಸಹಯೋಗದಲ್ಲಿ ಆಯೋಜಿಸಿದ್ದ ‘IGNITE GenZ Connect’ ವಿಶೇಷ ನಾಯಕತ್ವ ತರಬೇತಿ ಕಾರ್ಯಕ್ರಮವು ಆಗಸ್ಟ್ 15ರಂದು ಬಟ್ಟೆಮಲ್ಲಪ್ಪದ ಸಾರಾ ಸೆಂಟರ್ನಲ್ಲಿ ಯಶಸ್ವಿಯಾಗಿ ನಡೆಯಿತು.
ಯುವಜನರಲ್ಲಿ ಆತ್ಮವಿಶ್ವಾಸ, ಉತ್ತಮ ಸಂವಹನ, ನಾಯಕತ್ವದ ಗುಣ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ತರಬೇತಿಯಲ್ಲಿ ಒಟ್ಟು 38 ಯುವಜನರು ಉತ್ಸಾಹದಿಂದ ಪಾಲ್ಗೊಂಡರು.

ತರಬೇತುದಾರ ವಿನಾಯಕ ಅರಮನೆ ಅವರು ವಿವಿಧ ಚಟುವಟಿಕೆಗಳು, ಪ್ರಾಯೋಗಿಕ ಕಲಿಕೆ ಹಾಗೂ ವೈಯಕ್ತಿಕ ವಿಕಸನದ ಮೂಲಕ ನಾಯಕತ್ವದ ಅಗತ್ಯತೆ ಮತ್ತು ಅದರ ಮಹತ್ವವನ್ನು ಯುವಜನರಿಗೆ ಪರಿಚಯಿಸಿದರು. ತರಬೇತಿಯ ವಿವಿಧ ಹಂತಗಳಲ್ಲಿ ಭಾಗವಹಿಸಿದ ಯುವಜನರು ಸಕ್ರಿಯವಾಗಿ ತೊಡಗಿಸಿಕೊಂಡು ಹೊಸ ಅನುಭವಗಳನ್ನು ಪಡೆದುಕೊಂಡರು.
ಕಾರ್ಯಕ್ರಮಕ್ಕೆ ರ್ಯಾಂಕ್ಸ್ ಇನ್ಸ್ಟಿಟ್ಯೂಟ್ ಮಾಲೀಕ ವಿನಾಯಕ ಕರಬ, ಜೆಸಿಐ ಹೊಸನಗರ ಡೈಮಂಡ್ ಅಧ್ಯಕ್ಷ ಜೆಸಿ ಸಂದೀಪ್ ಹೆಚ್. ಹಾಗೂ ಸಾರಾ ಸಂಸ್ಥೆಯ ಪ್ರಮುಖರು ಸಹಕಾರ ನೀಡಿದರು. ಯುವಜನರು ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರ್ಯಾಂಕ್ಸ್ ಇನ್ಸ್ಟಿಟ್ಯೂಟ್ನ ನೂತನ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಯಿತು. ಸಂಸ್ಥೆಯ ವಿವಿಧ ಕೋರ್ಸ್ಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ವೆಬ್ಸೈಟ್ ರೂಪಿಸಲಾಗಿದೆ.
ತರಬೇತಿ ಪೂರ್ಣಗೊಳಿಸಿದ 38 ಯುವಜನರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಸಮಾರೋಪ ನೀಡಲಾಯಿತು. ಸ್ವಾತಂತ್ರ್ಯ ದಿನದಂದು ನಡೆದ ಈ ಕಾರ್ಯಕ್ರಮವು ಯುವಜನರಲ್ಲಿ ಆತ್ಮವಿಶ್ವಾಸ, ಹೊಸ ಚಿಂತನೆ ಹಾಗೂ ನಾಯಕತ್ವದ ಆಸಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

















Leave a Reply