ಹೊಸನಗರದ ‘ವಿನಾಯಕ ಲೋಕ’ದಲ್ಲಿ ದೇಶಭಕ್ತಿಯ ಚಿಂತನೆ: ‘ವಂದೇ ಮಾತರಂ-150ರ ಸಂಭ್ರಮ’ ವಿಶೇಷ ಗಣೇಶ ಪ್ರದರ್ಶನ

Addaheading 20260920 200344 0000 ಹೊಸನಗರದ ‘ವಿನಾಯಕ ಲೋಕ’ದಲ್ಲಿ ದೇಶಭಕ್ತಿಯ ಚಿಂತನೆ: ‘ವಂದೇ ಮಾತರಂ-150ರ ಸಂಭ್ರಮ’ ವಿಶೇಷ ಗಣೇಶ ಪ್ರದರ್ಶನ
Spread the love

ಹೊಸನಗರ: ಸ್ಥಳೀಯ ನೆಹರು ರಸ್ತೆಯ ನಿವಾಸಿ, ಸಾಹಿತಿ ಕೆ.ಎಸ್. ವಿನಾಯಕ ಅವರ ಮನೆಯ ‘ವಿನಾಯಕ ಲೋಕ’ದಲ್ಲಿ ಈ ಬಾರಿಯ ಗಣೇಶ ಚತುರ್ಥಿಯ ಅಂಗವಾಗಿ ‘ವಂದೇ ಮಾತರಂ ಗಣೇಶ’ ಎಂಬ ವಿನೂತನ ಶೀರ್ಷಿಕೆಯಡಿ ವೈವಿಧ್ಯಮಯ ಗಣಪತಿ ವಿಗ್ರಹಗಳ ಪ್ರದರ್ಶನ ಆರಂಭವಾಗಿದೆ. ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಈ ಬಾರಿಯ ಪ್ರದರ್ಶನವನ್ನು ದೇಶಭಕ್ತಿಯ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ.
   ಪ್ರದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು, ಅವರ ಪ್ರೇರಣಾದಾಯಕ ನುಡಿಮುತ್ತುಗಳು, ಬ್ರಿಟಿಷರ ಕಾಲದ ಕಾರಾಗೃಹ ಹಾಗೂ ನೇಣುಗಂಬದ ಮಾದರಿಗಳ ಜೊತೆಗೆ ಸ್ವಾತಂತ್ರ್ಯ ಸಂದೇಶಗಳನ್ನು ಸಾರುವ ಗಣೇಶನ ಮೂರ್ತಿಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. “ಭಾರತ್ ಮಾತಾ ಕೀ ಜೈ”, “ಸತ್ಯಾಗ್ರಹ ನಿತ್ಯ ಜೀವನದ ಮಂತ್ರವಾಗಲಿ” ಎಂಬ ದೇಶಪ್ರೇಮದ ಸಂದೇಶಗಳು ನೋಡುಗರ ಗಮನ ಸೆಳೆಯುತ್ತಿವೆ.

22 ವರ್ಷಗಳ ಸಂಗ್ರಹ ಹವ್ಯಾಸ: ತಮ್ಮ ಅಜ್ಜ ಕನಕಯ್ಯ ಹಾಗೂ ಪೋಷಕರಾದ ಸೀನಪ್ಪ ಶ್ರೇಷ್ಠಿ-ಸುಬ್ಬಲಕ್ಷ್ಮಮ್ಮ ಅವರ ಕಾಲದಿಂದ ಬಂದ ಪೂಜಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಕೆ.ಎಸ್. ವಿನಾಯಕ, ಕಳೆದ 22 ವರ್ಷಗಳಿಂದ ದೇಶದ ನಾನಾ ಭಾಗಗಳಿಂದ ವಿಶಿಷ್ಟ ಶೈಲಿಯ ಗಣೇಶ ಮೂರ್ತಿಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕಲಾವಿದರ ಕೈಚಳಕವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರೂಪುಗೊಂಡ ಇವರ ಸಂಗ್ರಹದಲ್ಲಿ 150 ವರ್ಷಗಳ ಹಳೆಯ ಮಣಿಗಣಪತಿ, ಮಣ್ಣಿನ ಗಣಪ ಮಾತ್ರವಲ್ಲದೆ, ಗಣೇಶನಿಗೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳು ಮತ್ತು ಸಾಹಿತ್ಯ ಸಂಗ್ರಹವಿದೆ.

ವಿವಿಧ ರೂಪಗಳಲ್ಲಿ ಗಣಪನ ದರ್ಶನ: ಪ್ರದರ್ಶನದಲ್ಲಿ ಪೇಪರ್, ಬಾಟಲಿ, ಕಾಫಿ ಬೀಜ, ಬದನೆಕಾಯಿ, ಸೋರೆಕಾಯಿ, ಲಾವಂಚದ ಬೇರು, ಸೀಮೆಸುಣ್ಣ, ವಿದ್ಯುತ್ ಬಲ್ಬ್, ಬಿದಿರು, ತೆಂಗಿನಕಾಯಿ ಹಾಗೂ ನವಧಾನ್ಯಗಳಿಂದ ರಚಿತವಾದ ಗಣಪತಿ ಮೂರ್ತಿಗಳು ಪ್ರಮುಖ ಆಕರ್ಷಣೆಯಾಗಿವೆ. ಜೊತೆಗೆ ಏಕಮುಖ, ದ್ವಿಮುಖ, ಪಂಚಮುಖ, ವಾದ್ಯಗೋಷ್ಠಿಯ ಗಣಪತಿ, ಕಪ್ಪೆಚಿಪ್ಪಿನ ಗಣಪತಿ ಹೀಗೆ ನೂರಾರು ಬಗೆಯ ಮೂರ್ತಿಗಳು ವೀಕ್ಷಕರನ್ನು ಬೆರಗುಗೊಳಿಸುತ್ತಿವೆ. ಕಳೆದ ವರ್ಷ ಇವರು ಆಯೋಜಿಸಿದ್ದ ‘ಮಮತೆಯ ಮಡಿಲು’ ಶೀರ್ಷಿಕೆಯ ಪಾರ್ವತಿ-ಗಣೇಶನ ಪ್ರದರ್ಶನವೂ ಸಹಸ್ರಾರು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

  ಉತ್ತಮ ಸಾಹಿತಿಯೂ ಆಗಿರುವ ವಿನಾಯಕ ಅವರು 500ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದು, ಅಂತರರಾಷ್ಟ್ರೀಯ ಮಟ್ಟದ ‘ಅಂಜಲಿ’ ಪ್ರಶಸ್ತಿ ಪಡೆದಿದ್ದಾರೆ. ಈ ಕಲಾ ಸಂಗ್ರಹ ಮತ್ತು ಸತ್ಕಾರ ಕಾರ್ಯಕ್ಕೆ ಅವರ ಪತ್ನಿ ಗೀತಾ, ಪುತ್ರಿ ದೀಪ್ತಿ ಹಾಗೂ ಪುತ್ರ ದೀಪಕ್ ಸಂಪೂರ್ಣ ಸಾಥ್ ನೀಡಿದ್ದಾರೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಮುಕ್ತವಾಗಿ ಬಂದು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಪರ್ಕ ಸಂಖ್ಯೆ: 9900902347

file 000000003f5c8208a0b120fec3430d9d1109889935387880779 ಹೊಸನಗರದ ‘ವಿನಾಯಕ ಲೋಕ’ದಲ್ಲಿ ದೇಶಭಕ್ತಿಯ ಚಿಂತನೆ: ‘ವಂದೇ ಮಾತರಂ-150ರ ಸಂಭ್ರಮ’ ವಿಶೇಷ ಗಣೇಶ ಪ್ರದರ್ಶನ

Leave a Reply

Your email address will not be published. Required fields are marked *

error: Content is protected !!