ಹೊಸನಗರ: ಪಟ್ಟಣದ ವೀರ ಸಾವರ್ಕರ್ ಮಂಟಪದಲ್ಲಿ ಸೆ.14ರಿಂದ 28ರವರೆಗೆ 15 ದಿನಗಳ ಕಾಲ ನಡೆಯಲಿರುವ ಹಿಂದು ಮಹಾಸಭಾ ಸಮಿತಿಯ 8ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸರ್ವ ರೀತಿಯ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಮಿತಿಯ ಗೌರವ ಸಂಚಾಲಕ ವಿನಾಯಕ ಶ್ರೇಷ್ಠಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ಲ ಚೌತಿಯಂದು ನಡೆಯುವ ಗಣೇಶ ಮೂರ್ತಿ ಪ್ರತಿಷ್ಠಾಪನಾ ಶೋಭಾಯಾತ್ರೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಸೆ.28ರಂದು ನಡೆಯುವ ಬೃಹತ್ ವಿಸರ್ಜನಾ ಶೋಭಾಯಾತ್ರೆ ‘ಹಿಂದು ದಿಗ್ವಿಜಯ ಯಾತ್ರೆ’ಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.
ಉತ್ಸವದ ಅಂಗವಾಗಿ ಸುಮಾರು 21 ಭಜನಾ ಮಂಡಳಿಗಳಿಂದ ನಿಗದಿತ ದಿನಗಳಲ್ಲಿ ಭಜನಾ ಸೇವೆ ನಡೆಯಲಿದೆ. ಎರಡು ಭರತನಾಟ್ಯ ಕಾರ್ಯಕ್ರಮಗಳು, ಗಮಕ ಕಾರ್ಯಕ್ರಮ, ಕೆರೋಕೆ ಸಂಗೀತ ಸಂಜೆ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಗಣೇಶ್ ಮಧುಕರ್ ತಿಳಿಸಿದ್ದಾರೆ.
ವಿಶ್ವಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ, ಸಂಘಟಿತ ಹಾಗೂ ಸಮರಸ ಹಿಂದು ಸಮಾಜ ನಿರ್ಮಾಣಕ್ಕಾಗಿ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಅಸ್ತಿತ್ವಕ್ಕಾಗಿ ಸಂಕಲ್ಪಿಸಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಚೆಸ್ ಸ್ಪರ್ಧೆ, ವಿಜ್ಞಾನ ಮೇಳ, ವಿಜ್ಞಾನ ಪ್ರದರ್ಶನ ಮತ್ತು ಸ್ಪರ್ಧೆ, ತಾಯಂದಿರು ಹಾಗೂ 10 ವರ್ಷದೊಳಗಿನ ಮಕ್ಕಳಿಗಾಗಿ ಯಶೋಧಾ–ಕೃಷ್ಣ ಛದ್ಮವೇಷ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ಕರಾಟೆ ಪ್ರದರ್ಶನ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಪ್ರಭಾರಿ ಮಂಜುನಾಥ್ ಪೂಜಾರಿ ತಿಳಿಸಿದರು.
ಸಮಿತಿಯು ಆಯೋಜಿಸಿರುವ ಎಲ್ಲ ಸ್ಪರ್ಧೆಗಳು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಸಮಾಜದ ಸಜ್ಜನ ಬಂಧುಗಳು, ಮಾತಾ-ಭಗಿನಿಯರು ಕುಟುಂಬ ಸಮೇತರಾಗಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯ ಸಂಚಾಲಕ ಅನೂಪ ಅರವಿಂದ್ ಸುದ್ದಿಗೋಷ್ಠಿ ಮೂಲಕ ಸಾರ್ವಜನಿಕರಿಗೆ ಆಹ್ವಾನ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪೂರ್ವ ಗೌರವ ಸಂಚಾಲಕರು, ಪ್ರಧಾನ ಸಂಚಾಲಕರು, ಕಾರ್ಯ ಸಂಚಾಲಕರು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
















Leave a Reply