ರಿಪ್ಪನ್‌ಪೇಟೆ: ಮಲೆನಾಡು ಪ್ರದೇಶವಾಗಿರುವ ಹೊಸನಗರ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಟಿ ಮಾಡಿರುವ ಭತ್ತದ ಬೆಳೆ ಒಣಗುತ್ತಿದ್ದು, ಸಾಲ ಮಾಡಿ ಬೆಳೆಸಿರುವ ಅಡಿಕೆ ತೋಟಗಳ ಮೇಲೂ ಬರದ ಪರಿಣಾಮ ತೀವ್ರವಾಗಿ ಬೀರುತ್ತಿದೆ ಎಂದು ಮ್ಯಾಮ್‌ಕೋಸ್ ನಿರ್ದೇಶಕ ಹಾಗೂ ಹೊಸನಗರ ಕೃಷಿಕ ಸಮಾಜದ ಉಪಾಧ್ಯಕ್ಷ ಧರ್ಮೇಂದ್ರ ಹೆಚ್. ಆತಂಕ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಹಲವು ಭಾಗಗಳಲ್ಲಿ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು ನಿರೀಕ್ಷಿತ ಪ್ರಮಾಣದಲ್ಲಿ ತುಂಬದೆ ಇರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಈಗಾಗಲೇ ರೈತರು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಗುಟ್ಕಾ ಮೇಲಿನ ನಿಷೇಧವನ್ನು ತೆರವುಗೊಳಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹೊಸನಗರ ತಾಲ್ಲೂಕನ್ನು ತಕ್ಷಣ ಬರಪೀಡಿತ ತಾಲ್ಲೂಕೆಂದು ಘೋಷಿಸಿ, ರೈತರು ಹಾಗೂ ನಾಗರಿಕರಿಗೆ ಸೂಕ್ತ ಪರಿಹಾರ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಧರ್ಮೇಂದ್ರ ಹೆಚ್. ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೊಸನಗರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ : ಮ್ಯಾಮ್‌ಕೋಸ್ ನಿರ್ದೇಶಕ ಧರ್ಮೇಂದ್ರ ಹೆಚ್ ಆಗ್ರಹ















Leave a Reply