
ರಿಪ್ಪನ್‌ಪೇಟೆ : ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದಕ್ಕೆ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆ ಅತ್ಯುತ್ತಮ ಉದಾಹರಣೆಯಾಗಿದೆ. ಶಾಲಾ ಸಂಸತ್ ಚುನಾವಣೆಯನ್ನು ಸಂಪೂರ್ಣ “ಬ್ಯಾಲೆಟ್-ಲೆಸ್” ಮಾದರಿಯಲ್ಲಿ, ಇವಿಎಂ ವ್ಯವಸ್ಥೆಯನ್ನು ಅನುಸರಿಸುವ ಮೊಬೈಲ್ ಆ್ಯಪ್ ನಿಂದ ಯಶಸ್ವಿಯಾಗಿ ನಡೆಸುವ ಮೂಲಕ ಈ ಶಾಲೆ ಎಲ್ಲರ ಗಮನ ಸೆಳೆದಿದೆ.
ಇದು ಕೇವಲ ವಿದ್ಯಾರ್ಥಿ ನಾಯಕರ ಆಯ್ಕೆಯ ಚುನಾವಣೆಯಾಗಿರದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ವಿಶಿಷ್ಟ ಶಿಕ್ಷಣ ಕಾರ್ಯಕ್ರಮವಾಗಿ ಮೂಡಿಬಂದಿದೆ.

ಇವಿಎಂ ಮಾದರಿಯ ಡಿಜಿಟಲ್ ಚುನಾವಣೆ: ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಬದಲಾಗಿ, ಶಾಲೆಯು ವಿಶೇಷ ಮೊಬೈಲ್ ಆ್ಯಪ್ ಮೂಲಕ ಚುನಾವಣೆ ನಡೆಸಿದೆ. ವಿದ್ಯಾರ್ಥಿಗಳು ಮತಗಟ್ಟೆಯಲ್ಲಿ ಇಡಲಾದ ಮೊಬೈಲ್ ಆಪ್ ನಲ್ಲಿ ಗುಪ್ತ ಮತದಾನದ ಮೂಲಕ ಅಭ್ಯರ್ಥಿಗಳ ಭಾವಚಿತ್ರ ಮತ್ತು ಹೆಸರನ್ನು ಪರಿಶೀಲಿಸಿ, ತಮ್ಮ ಆಯ್ಕೆಯ ಅಭ್ಯರ್ಥಿಯ ಎದುರಿನ ವೋಟಿಂಗ್ ಬಟನ್ ಒತ್ತುವ ಮೂಲಕ ಮತ ಚಲಾಯಿಸಿದರು. ಮತದಾನ ಯಶಸ್ವಿಯಾಗಿ ದಾಖಲಾಗಿರುವುದನ್ನೂ ಆಪ್ ದೃಢಪಡಿಸು ಪಾರದರ್ಶಕ ವ್ಯವಸ್ಥೆ ಅದರಲ್ಲಿರುವುದು ವಿಶೇಷ.
ದೇಶದ ಚುನಾವಣೆ ಮಾದರಿಯಲ್ಲೇ ಪ್ರಕ್ರಿಯೆ:
ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲೇ ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ಹಾಗೂ ಫಲಿತಾಂಶ ಘೋಷಣೆ ಸೇರಿದಂತೆ ಎಲ್ಲಾ ಹಂತಗಳನ್ನು ವ್ಯವಸ್ಥಿತವಾಗಿ ನಡೆಸಲಾಯಿತು.
ಒಟ್ಟು 18 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಅಂತಿಮವಾಗಿ 8 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಚುನಾವಣಾಧಿಕಾರಿಗಳ ಮಾರ್ಗದರ್ಶನ:
ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್ ಎಸ್.ಪಿ. ಅವರು ಚುನಾವಣಾಧಿಕಾರಿಯಾಗಿ ಹಾಗೂ ಸುರೇಶಪ್ಪ ಟಿ.ಹೆಚ್. ಅವರು ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು.
ಮಂತ್ರಿ ಮಂಡಲ ರಚನೆ: ಪ್ರಮಾಣವಚನದ ನಂತರ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಹಂಚಲಾಯಿತು. ಅಂಕಿತಾ (ಪ್ರಧಾನ ಮಂತ್ರಿ),ಚಂದನ್ ಕೆ.ಎಸ್ (ಉಪ ಪ್ರಧಾನಿ),ಸ್ವಪ್ನ ಎಸ್ ಆರ್( ಗೃಹ ಮಂತ್ರಿ),ಸ್ವಾತಿ ಎಸ್ ಕೆ (ಹಣಕಾಸು ಮಂತ್ರಿ), ನಿರೀಕ್ಷಾ ಗೌಡ(ಕ್ರೀಡಾ ಮಂತ್ರಿ),ರಂಜಿತ್ ಕೆ.ಎಸ್ (ನೀರಾವರಿ ಮಂತ್ರಿ), ಪ್ರತೀಕಾ ಕೆ.ಜೆ(ಸಾಂಸ್ಕೃತಿಕ ಮಂತ್ರಿ), ವೈಷ್ಣವಿ(ಆರೋಗ್ಯ ಮಂತ್ರಿ)ಯಾಗಿ ಖಾತೆ ಹಂಚಿಕೆ ಅಲ್ಲದೆ ಶಾಲೆಯ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೌರ್ಯ ,ಉಪಾಧ್ಯಕ್ಷರಾಗಿ ಋತ್ವಿಕ್ ,ಕಾರ್ಯದರ್ಶಿಯಾಗಿ ಕಾರ್ತಿಕ್ ಕೆ.ಯು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡುವ ಮೂಲಕ ಶಾಲಾ ಆಡಳಿತದಲ್ಲಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಪರಿಸರ ಸ್ನೇಹಿ ಶಾಲೆಯ ಮತ್ತೊಂದು ಹೆಜ್ಜೆ: ಈ ಚುನಾವಣೆಯ ವಿಶೇಷತೆ ಕೇವಲ ಡಿಜಿಟಲ್ ಮತದಾನವಷ್ಟೇ ಅಲ್ಲ. ಬ್ಯಾಲೆಟ್-ಲೆಸ್ ವ್ಯವಸ್ಥೆಯ ಮೂಲಕ ಕಾಗದದ ಬಳಕೆಯನ್ನು ಬಹುತೇಕ ತಪ್ಪಿಸಿ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಶಾಲೆ ಸಾರಿದೆ.
ಇದಲ್ಲದೆ, ಶಾಲೆಯ ಸಂಪೂರ್ಣ ವಿದ್ಯುತ್ ಅಗತ್ಯವನ್ನು ಸೋಲಾರ್ ಪವರ್ ವ್ಯವಸ್ಥೆ ಮೂಲಕ ಪೂರೈಸಲಾಗುತ್ತಿದೆ. ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಹಾಗೂ ಶಿಕ್ಷಕರ ಶ್ರಮ ದಿಂದ ಶಾಲೆಯ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ.
ಗ್ರಾಮೀಣ ಸರ್ಕಾರಿ ಶಾಲೆಯೊಂದು ತಂತ್ರಜ್ಞಾನ, ಪರಿಸರ ಸಂರಕ್ಷಣೆ ಮತ್ತು ಪ್ರಜಾಪ್ರಭುತ್ವ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ ಅನೇಕ ಸರ್ಕಾರಿ ಶಾಲೆಗಳಿಗಲ್ಲಿ ಒಂದಾಗಿದೆ.

ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ‘ಬ್ಯಾಲೆಟ್-ಲೆಸ್’ ಡಿಜಿಟಲ್ ಚುನಾವಣೆ ಶ್ಲಾಘನೀಯ. ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪ್ರಾಯೋಗಿಕ ಶಿಕ್ಷಣ ನೀಡಿರುವ ಈ ಪ್ರಯತ್ನ ಇತರೆ ಶಾಲೆಗಳಿಗೂ ಮಾದರಿಯಾಗಿದೆ.ಇಂತಹ ನವೀನ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿವೆ.”
– ಗಣೇಶ್ ವೈ., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊಸನಗರ

ಡಿಜಿಟಲ್ ಚುನಾವಣೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪ್ರಾಯೋಗಿಕ ಅನುಭವ ನೀಡುವುದು ನಮ್ಮ ಉದ್ದೇಶ.
– ನಾಗರಾಜ್ ಎಸ್.ಪಿ., ಮುಖ್ಯೋಪಾಧ್ಯಾಯರು, ಶಾಲಾ ಚುನಾವಣಾಧಿಕಾರಿ

ಡಿಜಿಟಲ್ ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಶಿಸ್ತು ಮತ್ತು ಉತ್ಸಾಹದಿಂದ ಭಾಗವಹಿಸಿದರು. ಈ ಅನುಭವವು ಅವರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜವಾಬ್ದಾರಿಯ ಅರಿವು ಮೂಡಿಸಿದೆ. – ಸುರೇಶಪ್ಪ ಟಿ.ಹೆಚ್., ಶಿಕ್ಷಕರು

ಶಾಲಾ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ನಮಗೆ ನೀಡಿರುವ ವಿಶ್ವಾಸಕ್ಕೆ ನಾನು ಚಿರಋಣಿ. ಪ್ರಧಾನ ಮಂತ್ರಿಯಾಗಿ ಶಾಲೆಯ ಅಭಿವೃದ್ಧಿ, ಶಿಸ್ತು, ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯನಿರ್ವಹಿಸುತ್ತೇನೆ.
– ಅಂಕಿತಾ, ವಿದ್ಯಾರ್ಥಿನಿ, ಶಾಲಾ ಪ್ರಧಾನ ಮಂತ್ರಿ

ಈ ಚುನಾವಣೆಯಿಂದ ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ತಿಳಿಯಿತು. ಮತದಾನ ಹಾಗೂ ಚುನಾವಣೆಯಲ್ಲಿ ಹೇಗೆ ಭಾಗವಹಿಸಬೇಕು ಎಂಬ ಪ್ರಾಯೋಗಿಕ ಅನುಭವ ನಮಗೆ ದೊರೆಯಿತು. – ಪ್ರತೀಕಾ ಕೆ.ಜೆ., ವಿದ್ಯಾರ್ಥಿನಿ (ಸಾಂಸ್ಕೃತಿಕ ಮಂತ್ರಿ)

ಡಿಜಿಟಲ್ ವೋಟಿಂಗ್ ಪ್ರಕ್ರಿಯೆಯಿಂದ ಪಾರದರ್ಶಕವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ನನಗೆ ನೀಡಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. – ನಿರೀಕ್ಷಾ ಗೌಡ, ವಿದ್ಯಾರ್ಥಿನಿ (ಕ್ರೀಡಾ ಮಂತ್ರಿ)

38 ಮತಗಳ ಅಂತರದಿಂದ ಗೆದ್ದಿರುವುದು ತುಂಬಾ ಸಂತಸ ತಂದಿದೆ. ವಿದ್ಯಾರ್ಥಿಗಳು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ. -ಋತ್ವಿಕ್ ಹೆಚ್.ಕೆ. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರು
















Leave a Reply