ಹೊಸನಗರ: ಸಹಕಾರ ಸಂಘಗಳು ಕೇವಲ ಸಾಲ ಸೌಲಭ್ಯ ಒದಗಿಸುವುದಕ್ಕಷ್ಟೇ ಸೀಮಿತವಾಗದೆ ಸೂಪರ್ ಮಾರ್ಕೆಟ್, ಮಾಲ್ ಹಾಗೂ ಹಾಲಿನ ಮಾರಾಟ ಕೇಂದ್ರಗಳಂತಹ ವಾಣಿಜ್ಯ ಸಂಸ್ಥೆಗಳನ್ನೂ ನಡೆಸಲು ಅವಕಾಶವಿದ್ದು, ಈ ಕ್ಷೇತ್ರ ಇನ್ನಷ್ಟು ಬಲವರ್ಧನೆಯಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ೨.೪೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತ ಮಂಡಳಿ ಹಾಗೂ ಸದಸ್ಯರು ಒಗ್ಗಟ್ಟಾಗಿ ಶ್ರಮಿಸಿದರೆ ಸಂಸ್ಥೆಯ ಉದ್ದೇಶಗಳನ್ನು ಯಶಸ್ವಿಯಾಗಿ ಈಡೇರಿಸಬಹುದು. ಮುಂದಿನ ೨೫ ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದ್ದು, ಆ ವೇಳೆಗೆ ಸಹಕಾರಿ ಕ್ಷೇತ್ರ ಹೊಸತನದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು. ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರೈತರಿಗೆ ಐದು ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಒದಗಿಸಲು ಆದೇಶಿಸಿದೆ. ಮಧ್ಯಪ್ರಾಚ್ಯ ಯುದ್ಧದ ನಡುವೆಯೂ ರಸಗೊಬ್ಬರ ಕೊರತೆಯಾಗದಂತೆ ಕೇಂದ್ರ ಸರ್ಕಾರ ಸಹಾಯಧನ ನೀಡಿ ಕಡಿಮೆ ದರದಲ್ಲಿ ಗೊಬ್ಬರ ಸಿಗುವಂತೆ ಮಾಡಿದೆ ಎಂದು ತಿಳಿಸಿದರು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, “ಕಳೂರು ರಾಮೇಶ್ವರ ಸಂಸ್ಥೆಯು ದೇಶದಲ್ಲೇ ಮೊದಲು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ನೀಡಿದ ಹೆಗ್ಗಳಿಕೆ ಹೊಂದಿದೆ. ಜಿಲ್ಲೆಯಲ್ಲಿ ಗೊಬ್ಬರ ಮಾರಾಟದಲ್ಲೂ ಮೊದಲ ಸ್ಥಾನದಲ್ಲಿದೆ. ಡಿಸಿಸಿ ಬ್ಯಾಂಕ್ ಸಹಕಾರ ವ್ಯವಸ್ಥೆಯಡಿ ಜಿಲ್ಲೆಯ ರೈತರಿಗೆ ೧,೪೦೦ ಕೋಟಿ ರೂ. ಕೃಷಿ ಸಾಲ ವಿತರಿಸಿದೆ” ಎಂದರು. ಇದೇ ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆಯಲು ನಡೆಸಿದ ಹೋರಾಟದಲ್ಲಿ ಸಹಕಾರಿ ಸದಸ್ಯರ ಪಾತ್ರ ಹಿರಿದು ಎಂದು ಸ್ಮರಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಹಕಾರಿ ರಂಗದಲ್ಲಿ ಸೌಲಭ್ಯಗಳಿದ್ದರೂ ರೈತರು ಮೀಟರ್ ಬಡ್ಡಿ ಹಾಗೂ ಖಾಸಗಿ ಸಾಲಕ್ಕೆ ಸಿಲುಕಿ ನರಳುತ್ತಿರುವುದು ವಿಷಾದನೀಯ. ಪ್ರತಿಯೊಬ್ಬ ರೈತನೂ ಸಹಕಾರ ಸಂಘದ ಸದಸ್ಯತ್ವ ಪಡೆಯಬೇಕು ಎಂದು ಕರೆ ನೀಡಿದ ಅವರು, ನಬಾರ್ಡ್ ಸಾಲದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡಿನ ಆರ್ಥಿಕ ಜೀವಾಳವಾಗಿರುವ ಅಡಕೆಗೆ ಕೃತಕ ಬಣ್ಣ ಬಳಿಯುವುದು ಅಪಾಯಕಾರಿ ಬೆಳವಣಿಗೆ. ಅಡಕೆಯನ್ನು ಕ್ಯಾನ್ಸರ್ ಕಾರಕವೆಂದು ಬಿಂಬಿಸಲು ಅಂತರರಾಷ್ಟ್ರೀಯ ಮಟ್ಟದಿಂದ ಒತ್ತಡವಿದ್ದರೂ, ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಿ.ಆರ್. ವಿನಯಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಂ. ಪರಮೇಶ್, ಜಿ.ಎನ್. ಸುಧೀರ್, ಮಧುಸೂದನ ನಾವಡ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್, ಪ್ರಮುಖರಾದ ಎಂ.ವಿ. ಜಯರಾಂ, ಇಂದುಧರ, ಸಂಸ್ಥೆಯ ಉಪಾಧ್ಯಕ್ಷ ಚಿನ್ನಪ್ಪ, ನಿರ್ದೇಶಕರಾದ ಎಚ್. ಶ್ರೀನಿವಾಸ್, ಮುರುಳೀಧರ ಹತ್ವಾರ್, ಸಿಇಒ ವೀರೇಂದ್ರ, ವಾಸಂತಿ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.















Leave a Reply