
ರಿಪ್ಪನ್ ಪೇಟೆ: ಸಮೀಪದ ಬಿದರಹಳ್ಳಿಯಲ್ಲಿ ಪತ್ತೆಯಾದ ಅಪ್ರಕಟಿತ ವೀರಗಲ್ಲು ಇದೀಗ ಇತಿಹಾಸಾಸಕ್ತರು ಹಾಗೂ ಶಾಸನ ಸಂಶೋಧಕರ ಗಮನ ಸೆಳೆಯುತ್ತಿದೆ. ಗ್ರಾಮದ ಸುತ್ತಮುತ್ತ ನಡೆದ ಪರಿಶೋಧನೆಯಲ್ಲಿ ಐದು ಮಾಸ್ತಿಕಲ್ಲುಗಳು ಹಾಗೂ ಒಂದು ಅಪರೂಪದ ವೀರಗಲ್ಲು ಪತ್ತೆಯಾಗಿದ್ದು, ಈ ವೀರಗಲ್ಲು ಸುಮಾರು ಕ್ರಿ.ಶ. 1202ರ ಕಾಲಘಟ್ಟಕ್ಕೆ ಸೇರಿದ್ದಾಗಿದೆ. ಗ್ರಾಮಸ್ಥರೆಲ್ಲರೂ ಸೇರಿ ವೀರಗಲ್ಲಿಗೆ ಒಂದು ಗುಡಿ ಕಟ್ಟಿ ಪೂಜಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹತ್ತು ಸಾಲುಗಳ ಶಾಸನ ಹೊಂದಿರುವ ಈ ವೀರಗಲ್ಲು ಹೊಸಗುಂದದ ಬೀರರಸನ ಕಾಲಕ್ಕೆ ಸೇರಿದ್ದು, ಶಾಸನದಲ್ಲಿ ಬೀರರಸನನ್ನು “ಸತ್ಯ ರತ್ನಾಕರ”, “ಸರಣಾಗತ ವಜ್ರಪಂಜರ”, “ಪರನಾರಿ ಸಹೋದರ” ಮುಂತಾದ ಬಿರುದುಗಳಿಂದ ಕೊಂಡಾಡಲಾಗಿದೆ. ಇದು ಆ ಕಾಲದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ನೀಡುವುದರ ಜೊತೆಗೆ, ರಾಜನ ಪ್ರಭಾವ ಮತ್ತು ವೈಭವವನ್ನು ಸ್ಪಷ್ಟಪಡಿಸುತ್ತದೆ.

ಸೈನ್ಯ ಎದುರಿಸಿ ವೀರಮರಣ: ಶಾಸನದ ಪ್ರಕಾರ, ಬೀರರಸನ ಸೈನ್ಯ ಸಾಗುತ್ತಿದ್ದ ವೇಳೆ ಸಾತಗೌಡನ ಮಗನು ಆ ಸೈನ್ಯವನ್ನು ಎದುರಿಸಿ ಯುದ್ಧದಲ್ಲಿ ವೀರಮರಣ ಹೊಂದಿದ್ದಾನೆ. ಆತನ ಸಾಹಸವನ್ನು ಸ್ಮರಿಸಲು ಲಕ್ಷೀತಾಯಿ ಬಿಲ್ಲಬ್ಬೆ ಗೌಡತಿ ಹಾಗೂ ಅಣ್ಣಬ್ಬೆ ಗೌಡತಿ ಎಂಬ ಮಹಿಳೆಯರು ಪರೋಕ್ಷ ವಿನಯಾರ್ಥವಾಗಿ ಈ ವೀರಗಲ್ಲನ್ನು ಸ್ಥಾಪಿಸಿದ್ದಾರೆ.
ವೀರನ ಸ್ಮರಣಾರ್ಥವಾಗಿ ವೀರಗಲ್ಲಿಗೆ ಪೂಜೆ ನಡೆಯುವಂತೆ ಉಂಬಳಿ ನೀಡಿದ ವಿಚಾರವೂ ಶಾಸನದಲ್ಲಿದೆ. ಇದಲ್ಲದೆ “ಸಾವಿರ ಖಂಡುಗ” ದಾನ ನೀಡಿದ ಉಲ್ಲೇಖವೂ ಕಂಡುಬಂದಿದ್ದು, ಆ ಕಾಲದ ದಾನಧರ್ಮ ಮತ್ತು ಆಚರಣೆಗಳ ಕುರಿತು ಮಹತ್ವದ ಮಾಹಿತಿಯನ್ನು ನೀಡುತ್ತದೆ.


ಗೂಳಿ – ಹಸುವಿನ ಮದುವೆ ಅಪರೂಪದ ಸಾಂಸ್ಕೃತಿಕ ದಾಖಲೆ: ಈ ಶಾಸನದ ಅತ್ಯಂತ ವಿಶೇಷ ಅಂಶವೆಂದರೆ “ಗೂಳಿ ಕವಿಲೆಯ ಮದುವೆ” ಕುರಿತು ದೊರೆತಿರುವ ಉಲ್ಲೇಖ. ಯುದ್ಧದಲ್ಲಿ ಮರಣ ಹೊಂದಿದ ವೀರನು ಅವಿವಾಹಿತನಾಗಿದ್ದರೆ, ಅವನ ಆತ್ಮಶಾಂತಿಗಾಗಿ ಗೂಳಿ ಮತ್ತು ಹಸುವಿನ ಮದುವೆ ಮಾಡುವ ಸಂಪ್ರದಾಯ ಇದ್ದುದನ್ನು ಶಾಸನ ದಾಖಲಿಸಿದೆ.
ಇಂತಹ ಆಚರಣೆಗಳು ಆ ಕಾಲದ ಜನರ ನಂಬಿಕೆ, ಸಂಸ್ಕೃತಿ ಮತ್ತು ಮರಣೋತ್ತರ ಆಚರಣೆಗಳ ಕುರಿತು ಅಮೂಲ್ಯ ಮಾಹಿತಿಯನ್ನು ನೀಡುತ್ತವೆ. ಇದು ಕೇವಲ ವೀರಗಲ್ಲಷ್ಟೇ ಅಲ್ಲ, ಮಧ್ಯಯುಗೀನ ಕನ್ನಡನಾಡಿನ ಸಾಮಾಜಿಕ-ಸಾಂಸ್ಕೃತಿಕ ಬದುಕಿನ ಜೀವಂತ ದಾಖಲೆಯಾಗಿ ಪರಿಣಮಿಸಿದೆ.
ಸಂಶೋಧಕರ ಪರಿಶ್ರಮಕ್ಕೆ ಮೆಚ್ಚುಗೆ: ಈ ಅಪರೂಪದ ವೀರಗಲ್ಲಿನ ಅಧ್ಯಯನವನ್ನು ಶಾಸನ ತಜ್ಞ ರಮೇಶ್ ಹಿರೆಜಂಬೂರು ಅವರ ಮಾರ್ಗದರ್ಶನದಲ್ಲಿ ಆದಿತ್ಯ ನಂಜವಳ್ಳಿ ಹಾಗೂ ಗಣೇಶ್ ಕೆ ಎನ್ ಕೋಣಂದೂರು ನಡೆಸಿದ್ದಾರೆ.

ಬಿದರಹಳ್ಳಿಯಲ್ಲಿ ಪತ್ತೆಯಾದ ಈ ವೀರಗಲ್ಲು ಕೇವಲ ಕಲ್ಲಿನ ಶಾಸನವಲ್ಲ; ಅದು ಕನ್ನಡ ನಾಡಿನ ಯುದ್ಧಸಾಹಸ, ಸಾಂಸ್ಕೃತಿಕ ನಂಬಿಕೆಗಳು ಮತ್ತು ದಾನಧರ್ಮದ ಪರಂಪರೆಯನ್ನು ಮೌನವಾಗಿ ಸಾರುತ್ತಿರುವ ಐತಿಹಾಸಿಕ ಸಾಕ್ಷಿಯಾಗಿದೆ. ಇಂತಹ ಪುರಾತನ ಸ್ಮಾರಕಗಳ ಸಂರಕ್ಷಣೆ ಮತ್ತು ವೈಜ್ಞಾನಿಕ ಅಧ್ಯಯನ ಅಗತ್ಯವಾಗಿದೆ ಎಂಬ ಮಾತು ಇತಿಹಾಸಾಸಕ್ತರಿಂದ ಕೇಳಿಬರುತ್ತಿದೆ.
ಪರಿಶೋಧನಾ ಕಾರ್ಯದಲ್ಲಿ ಗ್ರಾಮದ ಲಕ್ಷ್ಮಣ, ಲಿಂಗರಾಜು, ರಾಜೇಶ್, ರವಿ, ರಾಘು, ಮೋಹನ್ ಕುಮಾರ್ ಜೀವನ್, ಮಹೇಶ್ ಸೋಮಶೇಖರ್, ರೇಣುಕಪ್ಪ ಸೇರಿದಂತೆ ಹಲವರು ಇದ್ದರು.
ಈ ಶಾಸನ ಬೀರರಸನ ಕಾಲದ್ದಾಗಿದ್ದು, ಯುದ್ಧ ಮತ್ತು ವೀರಬಲಿದಾನದ ವಿವರಗಳನ್ನು ಒಳಗೊಂಡಿದೆ. ಅವಿವಾಹಿತ ವೀರನ ಸ್ಮರಣಾರ್ಥ ಗೂಳಿ-ಹಸುವಿನ ಮದುವೆ ಮಾಡಿ ಸಾವಿರ ಖಂಡುಗ ದಾನ ನೀಡಿದ ವಿಷಯ ವಿಶೇಷವಾಗಿದೆ.”
- ಗಣೇಶ್ ಕೋಣಂದೂರು, ಶಾಸನ ಸಂಶೋಧಕ
ಬಿದರಹಳ್ಳಿಯಲ್ಲಿ ಪತ್ತೆಯಾದ ಈ ಅಪರೂಪದ ಶಾಸನದಲ್ಲಿ ಗೂಳಿಕವಿಲೆಯ ಮದುವೆಯ ಉಲ್ಲೇಖ ಕಂಡುಬಂದಿದ್ದು, ಅಂದಿನ ಜನರ ನಂಬಿಕೆ, ಸಾಮಾಜಿಕ ಮೌಲ್ಯ ಮತ್ತು ಸಾಂಸ್ಕೃತಿಕ ಜೀವನವನ್ನು ಪರಿಚಯಿಸುತ್ತದೆ.”
- ಆದಿತ್ಯ ನಂಜವಳ್ಳಿ, ಶಾಸನ ಸಂಶೋಧಕ

#ಬಿದರಹಳ್ಳಿ #ವೀರಗಲ್ಲು #ಶಾಸನ #ಇತಿಹಾಸ #ಕನ್ನಡಇತಿಹಾಸ #ರಿಪ್ಪನ್‌ಪೇಟೆ #ಹೊಸಗುಂದ #ಬೀರರಸ #ಗೂಳಿಹಸುವಿನಮದುವೆ #ಮಧ್ಯಯುಗೀನಇತಿಹಾಸ #ಶಿವಮೊಗ್ಗ #ಕರ್ನಾಟಕಇತಿಹಾಸ #ಪುರಾತತ್ವ #Veeragallu #KannadaHistory #Epigraphy #HistoricalDiscovery








Leave a Reply