ಖಗೋಳ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆ: ಯುವಕರಲ್ಲಿ ವಿಜ್ಞಾನಾಸಕ್ತಿ ಬೆಳೆಸುವ ಉದ್ದೇಶ – ಸಂಸದ ಬಿ.ವೈ. ರಾಘವೇಂದ್ರ

IMG 20260316 WA0023 scaled ಖಗೋಳ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆ: ಯುವಕರಲ್ಲಿ ವಿಜ್ಞಾನಾಸಕ್ತಿ ಬೆಳೆಸುವ ಉದ್ದೇಶ – ಸಂಸದ ಬಿ.ವೈ. ರಾಘವೇಂದ್ರ
Spread the love

ಗ್ರಾಮೀಣ ಗ್ರಂಥಾಲಯಗಳನ್ನು ವಿಜ್ಞಾನ ಕಲಿಕಾ ಕೇಂದ್ರಗಳಾಗಿ ರೂಪಿಸಲು ಕ್ರಮ

ಶಿವಮೊಗ್ಗ: ಕೇಂದ್ರ ಸರ್ಕಾರ 2026-27ನೇ ಸಾಲಿನ ಆಯವ್ಯಯದಲ್ಲಿ ಖಗೋಳ ಪ್ರವಾಸೋದ್ಯಮ (ಆಸ್ಟ್ರೋ-ಟೂರಿಸಂ) ಪ್ರೋತ್ಸಾಹಿಸಲು ವಿಶೇಷ ಯೋಜನೆಯನ್ನು ಘೋಷಿಸಿರುವುದು ಯುವ ಪೀಳಿಗೆಗೆ ವಿಜ್ಞಾನ ಮತ್ತು ಬ್ರಹ್ಮಾಂಡದ ಅರಿವು ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.


ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಮಲ್ಲಿಗೇನಹಳ್ಳಿಯ ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನಿವಲ್ ಚರ್ಚ್‌ನಲ್ಲಿ ಆಯೋಜಿಸಿದ್ದ “ನಾನು ವಿಜ್ಞಾನಿ” ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಆನ್‌ಲೈನ್ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಆತಂಕದ ವಿಷಯವಾಗಿದೆ. 2030ರ ವೇಳೆಗೆ ದೇಶದ ಸುಮಾರು 65 ಶೇಕಡಾ ಯುವಜನತೆ ಮೊಬೈಲ್ ಬಳಕೆಯಿಂದ ಮಾನಸಿಕ ಅಸಮತೋಲನವನ್ನು ಎದುರಿಸುವ ಸಾಧ್ಯತೆ ಇದೆ. ಆದರೆ ದೇಶದಲ್ಲಿ ಮಾನಸಿಕ ಹಾಗೂ ನರರೋಗ ತಜ್ಞರು ಎರಡು ಲಕ್ಷ ಜನರಿಗೆ ಒಬ್ಬರಂತೆ ಇರುವ ಸ್ಥಿತಿ ಕಂಡುಬರುತ್ತಿದೆ ಎಂದು ಹೇಳಿದರು.


ವಿದ್ಯಾರ್ಥಿಗಳಲ್ಲಿರುವ ವೈಜ್ಞಾನಿಕ ಮತ್ತು ಶೈಕ್ಷಣಿಕ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿದ್ದು, ಗ್ರಾಮೀಣ ಗ್ರಂಥಾಲಯಗಳು ಮತ್ತು ಜ್ಞಾನ ಕೇಂದ್ರಗಳನ್ನು ವಿಜ್ಞಾನ ಕಲಿಕಾ ಕೇಂದ್ರಗಳಾಗಿ ರೂಪಿಸುವ ಮೂಲಕ ಗ್ರಾಮೀಣ ಯುವ ಪೀಳಿಗೆಯಲ್ಲಿ ವಿಜ್ಞಾನದತ್ತ ಹೆಚ್ಚಿನ ಆಸಕ್ತಿ ಮೂಡಿಸಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಸ್ಮರಿಸಿದ ಅವರು, ರಾಮೇಶ್ವರಂ ಎಂಬ ಸಣ್ಣ ಹಳ್ಳಿಯಿಂದ ಬಂದ ಕಲಾಂ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದನ್ನು ಉದಾಹರಣೆಯಾಗಿ ಹೇಳಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಮಾತನಾಡಿ, “ನಮ್ಮ ಊರು ನಮ್ಮ ಬೇರು” ಎಂಬ ತತ್ವದೊಂದಿಗೆ ಜಿಲ್ಲೆಯ ಗ್ರಂಥಪಾಲಕರು ಹವ್ಯಾಸಿ ವಿಜ್ಞಾನಿಗಳಾಗಿ “ನಾನು ವಿಜ್ಞಾನಿ” ಕಾರ್ಯಾಗಾರವನ್ನು ಯಶಸ್ವಿಯಾಗಿ ಆರಂಭಿಸಿರುವುದು ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದರು.


ಈ ಕಾರ್ಯಾಗಾರದಲ್ಲಿ ಗ್ರಂಥಪಾಲಕರು ತಮ್ಮದೇ ಆದ ದೂರದರ್ಶಕಗಳನ್ನು ವಿನ್ಯಾಸಗೊಳಿಸಿ ತಯಾರಿಸಿದ್ದು, ಅವುಗಳ ಮೂಲಕ ಗ್ರಹಗಳು ಹಾಗೂ ಉಪಗ್ರಹಗಳನ್ನು ವೀಕ್ಷಿಸುವ ಪ್ರಾಯೋಗಿಕ ಅನುಭವವನ್ನು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ವಿಜ್ಞಾನ ಕ್ಲಬ್‌ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯಗಳು ಬ್ರಹ್ಮಾಂಡದ ಅದ್ಭುತಗಳನ್ನು ಅರಿಯಲು ಹಾಗೂ ವೈಜ್ಞಾನಿಕ ಕುತೂಹಲವನ್ನು ಬೆಳೆಸಲು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನಿವಲ್ ಚರ್ಚ್‌ನ ಮುಖ್ಯಸ್ಥ ಫಾ. ಪಿಂಟೋ, ಜಿ.ಪಂ ಸಿಇಒ ಹೇಮಂತ್ ಎನ್, ಉಪ ಕಾರ್ಯದರ್ಶಿ ಸುಜಾತ, ವಿಜ್ಞಾನಿಗಳು, ಗ್ರಂಥಪಾಲಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *