ಸಾಗರ : ಆನಂದಪುರ–ಶಿಕಾರಿಪುರ ಹೆದ್ದಾರಿಯ ದಾಸಕೊಪ್ಪ ಮಸೀದಿ ಸಮೀಪ ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಯುವಕನೋರ್ವ ಮೃತಪಟ್ಟಿರುವ ದುರಂತ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಸಿದ್ದಿಕ್ (26) ಮೃತ ದುರ್ದೈವಿ.
ಆನಂದಪುರ ಕಡೆಯಿಂದ ಗೌತಮಪುರದ ಬಿಲಗುಂಜಿ ಗ್ರಾಮಕ್ಕೆ ತೆರಳುತ್ತಿದ್ದ ತೀರ್ಥೇಶ್ (25) ಅವರ ಬೈಕ್ ಹಾಗೂ ಮಸೀದಿ ಪಕ್ಕದ ರಸ್ತೆಯಿಂದ ಮುಖ್ಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಮೊಹಮ್ಮದ್ ಸಿದ್ದಿಕ್ ಅವರ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಸಿದ್ದಿಕ್ ಅವರನ್ನು ಸ್ಥಳೀಯರ ನೆರವಿನೊಂದಿಗೆ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಾಯಗೊಂಡ ಮತ್ತೋರ್ವ ಸವಾರ ತೀರ್ಥೇಶ್ ಅವರಿಗೂ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೃತ ಸಿದ್ದಿಕ್ ಅವರ ತಂದೆ ಈ ಹಿಂದೆಯೇ ತೀರಿಕೊಂಡಿದ್ದು, ಆಟೋರಿಕ್ಷಾ ಚಲಾಯಿಸುತ್ತಾ ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೊಬ್ಬರೇ ಹೊತ್ತಿದ್ದರು. ತಾಯಿಗೆ ಆಸರೆಯಾಗಿ ಜೀವನ ಸಾಗಿಸುತ್ತಿದ್ದ ಯುವಕನ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
















Leave a Reply