ರಿಪ್ಪನ್‌ಪೇಟೆ: ಸಮೀಪದ ಗರ್ತಿಕೆರೆಯ ಕುಮುದ್ವತಿ ಶಾಲಾ ಆವರಣದಲ್ಲಿ ನಡೆದ ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ 18ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ 2025–26ನೇ ಸಾಲಿನ 40,48,974 ರೂ. ನಿವ್ವಳ ಲಾಭ ಘೋಷಿಸಿ, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಟ್ ಪ್ರಕಟಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕಿರಣ್ ಜೆ.ಪಿ. ಮಾತನಾಡಿ, 2009–10ರಲ್ಲಿ ಕೇವಲ 300 ಸದಸ್ಯರು ಹಾಗೂ 3 ಲಕ್ಷ ರೂ. ಷೇರು ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಇಂದು 2,322 ಸದಸ್ಯರನ್ನು ಹೊಂದಿದ್ದು, 87.70 ಲಕ್ಷ ರೂ. ಪಾಲು ಬಂಡವಾಳ ಮತ್ತು 60.14 ಕೋಟಿ ರೂ. ಒಟ್ಟು ವ್ಯವಹಾರ ನಡೆಸುವ ಮಟ್ಟಕ್ಕೆ ಬೆಳೆದಿದೆ ಎಂದರು.
2025–26ನೇ ಸಾಲಿನಲ್ಲಿ ಠೇವಣಿ 10.41 ಕೋಟಿ ರೂ. ತಲುಪಿದ್ದು, ಕಳೆದ ವರ್ಷಕ್ಕಿಂತ ಶೇ.21.48ರಷ್ಟು ಹೆಚ್ಚಳ ಕಂಡಿದೆ. ವರದಿ ಸಾಲಿನಲ್ಲಿ 9.06 ಕೋಟಿ ರೂ. ಹೊಸ ಸಾಲ ವಿತರಿಸಲಾಗಿದ್ದು, ವರ್ಷಾಂತ್ಯಕ್ಕೆ ಒಟ್ಟು ಸಾಲ 11.71 ಕೋಟಿ ರೂ. ಆಗಿದ್ದು, ಇದು ಶೇ.21.11ರಷ್ಟು ಹೆಚ್ಚಳವಾಗಿದೆ. ಜೊತೆಗೆ 1.71 ಕೋಟಿ ರೂ. ಹೂಡಿಕೆ ಹೊಂದಿರುವ ಸಂಸ್ಥೆ “ಎ” ದರ್ಜೆ ಸಹಕಾರಿಯಾಗಿ ವರ್ಗೀಕರಣಗೊಂಡಿದೆ ಎಂದು ತಿಳಿಸಿದರು.
ಕಳೆದ ವರ್ಷ ಶೇ.8ರಷ್ಟು ಲಾಭಾಂಶ ನೀಡಲಾಗಿದ್ದರೆ, ಈ ಬಾರಿ ಶೇ.10ರಷ್ಟು ಡಿವಿಡೆಂಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಸಹಕಾರಿಗೆ ಸ್ವಂತ ಆಡಳಿತ ಕಟ್ಟಡ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಹೊಂದಿದ್ದು, ಎಲ್ಲ ಸದಸ್ಯರ ಸಹಕಾರ ಅಗತ್ಯವೆಂದು ಮನವಿ ಮಾಡಿದರು.
ಸಭೆಯಲ್ಲಿ ವಾರ್ಷಿಕ ಆಡಳಿತ ವರದಿ, ಆಯ-ವ್ಯಯ ಪತ್ರ, ಅನುಪಾಲನಾ ವರದಿ, ನಿವ್ವಳ ಲಾಭದ ವಿವರ,ಕ್ರಿಯಾ ಯೋಜನೆ ಹಾಗೂ ಪರಿಷ್ಕೃತ ಆಯ-ವ್ಯಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಿರ್ದೇಶಕ ವಸಂತ್ ಕುಮಾರ್ ಬೆಳ್ಳೂರು ಪರಿಷ್ಕೃತ ಆಯ-ವ್ಯಯ ಮಂಡಿಸಿದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಕುಮಾರ್ ಲಾಭಾಂಶ ಸಮೀಕರಣ ಹಾಗೂ ಹೋಕುಬಾಕಿ ನಿಧಿಗಳ ಕುರಿತು ಮಾಹಿತಿ ನೀಡಿದರು.
ಲೆಕ್ಕಪರಿಶೋಧಕ ಬಿ.ವಿ. ರವೀಂದ್ರನಾಥ್ ಮಾತನಾಡಿ, ಆದಾಯ ತೆರಿಗೆ ಸೇರಿದಂತೆ ಎಲ್ಲ ಆರ್ಥಿಕ ವ್ಯವಹಾರಗಳಲ್ಲಿ ಕಾನೂನುಬದ್ಧ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ವಿಭಾಗದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಉತ್ತಮ ವ್ಯವಹಾರ ನಡೆಸಿದ ಸದಸ್ಯರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಸೋಮಶೇಖರ್ ಟಿ.ಡಿ., ನಿರ್ದೇಶಕರಾದ ವೀರಭದ್ರಪ್ಪ, ಹೆಚ್.ಎಂ. ರಾಘವೇಂದ್ರ, ನಯನಕುಮಾರ್, ಅಶ್ವಥ್ ಕುಮಾರ್ ಡಿ., ಕರುಣೇಶ್ ಬಿ.ಎಂ., ಶೋಭಾ, ವಿನಾಯಕ ನಾರಾಯಣ ಭಟ್, ಶಿಲ್ವಾ ವೈ.ಸಿ., ಶಾಖಾ ವ್ಯವಸ್ಥಾಪಕ ವಿನಯಕುಮಾರ್ ಹೆಚ್.ಎಸ್., ಸಿಬ್ಬಂದಿಗಳಾದ ಪಲ್ಲವಿ ಕೆ.ಜಿ., ಪವಿತ್ರ ಬಿ. ಹಾಗೂ ನೂರಾರು ಸದಸ್ಯರು ಉಪಸ್ಥಿತರಿದ್ದರು.
















Leave a Reply