ರಿಪ್ಪನ್ಪೇಟೆ: ಸಮೀಪದ ಹುಂಚದಕಟ್ಟೆಯಲ್ಲಿ ತೀರ್ಥಹಳ್ಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಅರಳಸುರಳಿ ವಲಯದ ಹುಂಚದಕಟ್ಟೆ ಕಾರ್ಯಕ್ಷೇತ್ರದ ಶ್ರೀಮಾತಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ವಿನೂತನ ಕ್ರೀಡಾಕೂಟ ಜನಾಕರ್ಷಣೆಗೆ ಕಾರಣವಾಯಿತು.
ಗ್ರಾಮೀಣ ಮಹಿಳೆಯರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು ಹಾಗೂ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ ಚಾಲನೆ ನೀಡಿ ಮಾತನಾಡಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಹಿಳೆಯರು ನಿತ್ಯದ ಸಂಸಾರದ ಜಂಜಾಟದಿಂದ ಹೊರಬಂದು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ, ಮಾನಸಿಕ ದೃಢತೆ, ಶಿಸ್ತು, ಸಮಯಪಾಲನೆ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಯರ ಕ್ರೀಡಾ ಪಾಲ್ಗೊಳ್ಳುವಿಕೆ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜದಲ್ಲಿ ಸಮಾನ ಅವಕಾಶ ಮತ್ತು ಸಬಲೀಕರಣಕ್ಕೂ ಉತ್ತೇಜನ ನೀಡುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಘುವೇಂದ್ರ (ರಾಘು) ಮಾತನಾಡಿ, ಮಹಿಳಾ ಕ್ರೀಡೆಗಳು ದೈಹಿಕ ಸಾಮರ್ಥ್ಯ, ಆರೋಗ್ಯ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶಂಕರಳ್ಳಿ ಹಾಲಪ್ಪ, ಪ್ರವೀಣ್ ಅಂಗಡಿ, ನಾಗೇಶ್, ತೀರ್ಥಹಳ್ಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಗದೀಶ ಅಲಸೆ, ಜೆ.ಎಂ.ಎಸ್.ವೈ. ಬಾಲಚಂದ್ರಕೃಷ್ಣ, ಅರಳಸುರಳಿ ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ, ತಾಲ್ಲೂಕು ಸಮನ್ವಯ ಅಧಿಕಾರಿ ಶ್ವೇತಾ, ಸೇವಾ ಪ್ರತಿನಿಧಿ ನೇತ್ರಾವತಿ, ಉಮೇಶ್, ಜ್ಞಾನ ವಿಕಾಸ ಕಾರ್ಯಕ್ರಮದ ಸದಸ್ಯೆ ಗೌರಮ್ಮ, ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

















Leave a Reply