ವಾರಂಬಳ್ಳಿ ಕಲ್ಯಾಣೇಶ್ವರ ದೇವಸ್ಥಾನದಿಂದ ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಗ್ರಿ, 100 ಬ್ಯಾಗ್ ವಿತರಣೆ
ಹೊಸನಗರ : ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ, ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಸಾಮಾಜಿಕ ಕೇಂದ್ರಗಳಾಗಬೇಕು ಎಂದು ವಾರಂಬಳ್ಳಿಯ ಕಲ್ಯಾಣೇಶ್ವರ ದೇವಸ್ಥಾನದ ಕಾರ್ಯದರ್ಶಿ ವಿನಾಯಕ ಪ್ರಭು ವಾರಂಬಳ್ಳಿ ಹೇಳಿದರು.
ವಾರಂಬಳ್ಳಿಯ ಕಲ್ಯಾಣೇಶ್ವರ ದೇವಸ್ಥಾನದ ಆಶ್ರಯದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಹಾಗೂ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಊರಿನ ಔಷಧಾಲಯ, ವಿದ್ಯಾಲಯ ಹಾಗೂ ದೇವಾಲಯಗಳು ಸುಸ್ಥಿರವಾಗಿದ್ದರೆ ಇಡೀ ಊರಿನ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ಶಾಲೆಯ SDMC ಅಧ್ಯಕ್ಷ ಪ್ರಕಾಶ್ ಗೊರದಳ್ಳಿ ಮಾತನಾಡಿ, ನಮ್ಮ ಶಾಲೆಗೆ ಪ್ರತಿವರ್ಷ ಅನೇಕ ದಾನಿಗಳು ಕಲಿಕಾ ಸಾಮಗ್ರಿ, ಶಾಲೆಗೆ ಅಗತ್ಯವಾದ ವಸ್ತುಗಳನ್ನು ನೀಡುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕ ಮಲ್ಡ್ಯಪ್ಪ ಮಾತನಾಡಿ, “ನಮ್ಮ ಊರಿನ ಸರ್ಕಾರಿ ಶಾಲೆಗಳ ಅಳಿವು-ಉಳಿವು ನಮ್ಮ ಕೈಯಲ್ಲಿದೆ. ಎಲ್ಲರೂ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.
ದಾನಿಗಳ ಸಹಕಾರದೊಂದಿಗೆ ವಾರಂಬಳ್ಳಿಯ ಕಲ್ಯಾಣೇಶ್ವರ ದೇವಸ್ಥಾನದ ಆಶ್ರಯದಲ್ಲಿ ಪ್ರತಿವರ್ಷ ವಿವಿಧ ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಗ್ರಿ, ಬ್ಯಾಗ್, ಸಮವಸ್ತ್ರ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ. ಈ ವರ್ಷ ಐದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಹಾಗೂ 100 ಶಾಲಾ ಬ್ಯಾಗ್ಗಳನ್ನು ವಿತರಿಸಲಾಯಿತು. ದೇವಸ್ಥಾನವು ಶಿಕ್ಷಣದ ಜೊತೆಗೆ ಊರಿನ ಅಭಿವೃದ್ಧಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಕಾರ್ಯಕ್ರಮದಲ್ಲಿ ದೇವಸ್ಥಾನದ ಉಪಾಧ್ಯಕ್ಷೆ ತಾರಾ ಗಿರೀಶ್, ನಾಗರಾಜ್ ಆಚಾರ್, ಶಿಕ್ಷಕಿ ದೀಪ, ಸುಭದ್ರಬಾಯಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
















Leave a Reply