ಹೊಸನಗರ : ಶರಾವತಿ ಹಿಂನ್ನೀರು ಪ್ರದೇಶ ಇದೀಗ ಗೋಹಂತಕರ ತವರೂರಾಗಿ ಮಾರ್ಪಟ್ಟಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ. ಹೊಸನಗರ ಸಮೀಪದ ಪಟಗುಪ್ಪ ಸೇತುವೆ ಹಾಗೂ ಅದರ ಸುತ್ತಮುತ್ತಲಿನ ಹಿನ್ನೀರು ಪ್ರದೇಶ ಅಕ್ರಮ ಚಟುವಟಿಕೆಗಳ ಸುರಕ್ಷಿತ ಅಡ್ಡೆಯಾಗಿ ಬದಲಾಗಿರುವ ಆತಂಕಕಾರಿ ಚಿತ್ರಣ ಹೊರಬಂದಿದೆ.
ಇತ್ತೀಚೆಗೆ ಪಟಗುಪ್ಪ ಸೇತುವೆ ಸಮೀಪದಲ್ಲಿ ಮೀನು ಹಿಡಿಯುವ ನೆಪದಲ್ಲಿ ಬಂದಿದ್ದ ಅನ್ಯಕೋಮಿನ ನಾಲ್ವರು ಯುವಕರು ಮೇಯುತ್ತಿದ್ದ ಗೋವೊಂದರ ಕತ್ತು ಸೀಳಿ ಹತ್ಯೆಗೈದ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಗಂಭೀರತೆಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಪ್ರಕರಣದ ಸಂಬಂಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಕ್ರಮಗಳ ಆಗರವಾದ ಪಟಗುಪ್ಪ ಸೇತುವೆ:
ಹೊಸನಗರ ಮತ್ತು ಸಾಗರ ತಾಲೂಕಿನ ಗಡಿ ಭಾಗದಲ್ಲಿರುವ ಪಟಗುಪ್ಪ ಸೇತುವೆ ಜನನಿಬಿಡ ಪ್ರದೇಶದಿಂದ ದೂರವಿದ್ದು, ವಿಶಾಲ ಹಿನ್ನೀರು ಪ್ರದೇಶದಿಂದ ಆವೃತವಾಗಿದೆ. ಈ ಭೌಗೋಳಿಕ ಪರಿಸ್ಥಿತಿಯನ್ನೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಜಾಲಗಳು ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಮಾಹಿತಿ ಪ್ರಕಾರ, ಮೀನುಗಾರಿಕೆಯ ಸೋಗಿನಲ್ಲಿ ಬರುವ ಕೆಲ ದುಷ್ಕರ್ಮಿಗಳು ಗೋಹತ್ಯೆ ನಡೆಸಿ, ಅಲ್ಲಿಯೇ ಮಾಂಸವನ್ನು ಸಂಸ್ಕರಿಸಿ ಬೇರೆಡೆ ಸಾಗಿಸುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಪೂರಕವಾಗುವ ಹಲವು ಅನುಮಾನಾಸ್ಪದ ಘಟನೆಗಳು ಸಂಭವಿಸಿದೆ.

ಹಿನ್ನೀರು ಪ್ರದೇಶದಲ್ಲಿ ಅನೇಕ ಗೋವಿನ ತಲೆಬುರುಡೆ!
ಸ್ಥಳ ಪರಿಶೀಲನೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ದೃಶ್ಯಗಳು ಕಂಡುಬಂದಿವೆ. ಹಿನ್ನೀರು ಪ್ರದೇಶದ ವಿವಿಧ ಕಡೆಗಳಲ್ಲಿ ಗೋವಿನ ತಲೆಬುರುಡೆಗಳು, ಚರ್ಮ, ಮೂಳೆಗಳು ಹಾಗೂ ಮಾಂಸದ ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿ ಕಲ್ಲು ಕಟ್ಟಿ ನೀರಿಗೆ ಎಸೆಯಲಾಗಿರುವ ಹತ್ತಾರು ಚೀಲಗಳು ಪತ್ತೆಯಾಗಿವೆ.
ಸದ್ಯ ಹಿಂನ್ನೀರು ಪ್ರದೇಶದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಈ ಎಲ್ಲ ಚೀಲಗಳು ಹಾಗೂ ಅವಶೇಷಗಳು ಬಹಿರಂಗವಾಗಿವೆ. ಇದು ಒಂದೆರಡು ಘಟನೆಗಳಲ್ಲ, ಸಂಘಟಿತ ರೀತಿಯಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಗೋಹತ್ಯೆ ಜಾಲದ ಸುಳಿವನ್ನು ನೀಡುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ?
ಪಟಗುಪ್ಪ ಸೇತುವೆ ಸುತ್ತಮುತ್ತ ಅಕ್ರಮ ಗೋಹತ್ಯೆ, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ. ಆದರೆ ಇವುಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಟೀಕೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.
ಇಷ್ಟೊಂದು ಪ್ರಮಾಣದಲ್ಲಿ ಗೋವಿನ ಅವಶೇಷಗಳು ಪತ್ತೆಯಾಗಿದ್ದರೂ, ಈ ಕೃತ್ಯಗಳ ಹಿಂದಿರುವ ಜಾಲವನ್ನು ಪತ್ತೆಹಚ್ಚಿ ಬೇರು ಸಮೇತ ಕಿತ್ತುಹಾಕುವ ಕಾರ್ಯ ಇನ್ನೂ ನಡೆಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯ: ಪಟಗುಪ್ಪ ಸೇತುವೆ ಸಮೀಪದ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳ ನಡುವೆ ಸಾರ್ವಜನಿಕರೂ ತಮ್ಮ ಜವಾಬ್ದಾರಿಯನ್ನು ಅರಿಯಬೇಕಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದು, ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಸಹಕರಿಸಬೇಕಿದೆ. ಸಾರ್ವಜನಿಕರ ಜಾಗೃತಿ ಮತ್ತು ಸಹಭಾಗಿತ್ವದಿಂದ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ.
ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ : ಪಟಗುಪ್ಪ ಸೇತುವೆ ಪ್ರದೇಶದಲ್ಲಿ ನಿರಂತರವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಆರೋಪಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಈ ಭಾಗದಲ್ಲಿ ನಿರಂತರ ಪೊಲೀಸ್ ಬೀಟ್, ಚೆಕ್‌ಪೋಸ್ಟ್, ಸಿಸಿಟಿವಿ ಕಣ್ಗಾವಲು ಹಾಗೂ ವಿಶೇಷ ಕಾರ್ಯಪಡೆ ರಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಶರಾವತಿ ಹಿನ್ನೀರು ಪ್ರದೇಶ ಅಕ್ರಮ ಚಟುವಟಿಕೆಗಳ ಆಶ್ರಯ ತಾಣವಾಗುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಬೇಕಿದೆ.
ಇಲ್ಲದಿದ್ದರೆ ಪಟಗುಪ್ಪ ಸೇತುವೆ ಪ್ರದೇಶವು ರಾಜ್ಯದ ಅತಿದೊಡ್ಡ ಅಕ್ರಮ ಗೋಹತ್ಯೆ ಜಾಲದ ಕೇಂದ್ರವಾಗಿ ಗುರುತಿಸಿಕೊಳ್ಳುವ ದಿನಗಳು ದೂರವಿಲ್ಲ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಪಟಗುಪ್ಪ ಸೇತುವೆ ಸಮೀಪದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
- ಗೌಡಪ್ಪ ಗೌಡರ್,ವೃತ್ತ ನಿರೀಕ್ಷಕರು
ಗೋಹತ್ಯೆ ಯತ್ನ ಪ್ರಕರಣದ ಆರೋಪಿಗಳು ಇನ್ನೂ ಬಂಧನವಾಗದಿರುವುದು ಆತಂಕಕಾರಿ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
-ದೇವರಾಜ್ ಅರಳಿಹಳ್ಳಿ, ಹಿಂದೂ ಜಾಗರಣ ವೇದಿಕೆ















Leave a Reply