
ಶಿವಮೊಗ್ಗ, ಮೇ 13: ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದ “ಮಾನವ–ವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ” ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಮೇ 14 ಮತ್ತು 15ರಂದು ಆಯೋಜಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆ, ಚಿಕ್ಕಮಗಳೂರು ವೃತ್ತ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಸಮ್ಮೇಳನ ನಡೆಯಲಿದೆ.
ಮೇ 14ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ರಾಜ್ಯ ಸರ್ಕಾರದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಉದ್ಘಾಟಿಸಲಿದ್ದಾರೆ. ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, SACON ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎಚ್.ಎನ್. ಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ವನ್ಯಜೀವಿ ತಜ್ಞರಿಂದ 12 ವಿಶೇಷ ಉಪನ್ಯಾಸಗಳು ನಡೆಯಲಿವೆ. ಮೊದಲ ದಿನ ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಬಿಕ್ಕಟ್ಟಿನ ಕುರಿತು ಪ್ರೊ. ಟಿ.ಎನ್. ಪ್ರಕಾಶ್ ಕಮ್ಮರ್ಡಿ, ಕರ್ನಾಟಕದ ವನ್ಯಜೀವಿ ಸಂಘರ್ಷ ಕುರಿತು ಡಾ. ಹೊನ್ನವಳ್ಳಿ ಎನ್. ಕುಮಾರ್, ಚಿರತೆಗಳೊಂದಿಗಿನ ಸಹಬಾಳ್ವೆ ಕುರಿತು ಡಾ. ಸಂಜಯ್ ಗುಬ್ಬಿ, ಹುಲಿ-ಮಾನವ ಸಂಘರ್ಷ ಕುರಿತು ಡಾ. ಪಿ.ಎಸ್. ಹರ್ಷ, ಆನೆಗಳ ಸಂಘರ್ಷ ಕುರಿತು ಡಾ. ತಮ್ಮಯ್ಯ ಸಿ.ಕೆ. ಹಾಗೂ ಮಾನವ ಹಸ್ತಕ್ಷೇಪವು ವನ್ಯಜೀವಿಗಳ ನಿರ್ಧಾರಗಳ ಮೇಲೆ ಬೀರುವ ಪರಿಣಾಮ ಕುರಿತು ಡಾ. ಹರೀಶ್ ಪ್ರಕಾಶ್ ಉಪನ್ಯಾಸ ನೀಡಲಿದ್ದಾರೆ.
ಮೇ 15ರಂದು ನಡೆಯುವ ಎರಡನೇ ದಿನದ ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ಸೋಲಿಗರ ಸಾಂಪ್ರದಾಯಿಕ ಜ್ಞಾನ ಕುರಿತು ಡಾ. ಸಿ. ಮಾದೇಗೌಡ, ತಾಂತ್ರಿಕ ಬಳಕೆ ಕುರಿತು ಪ್ರೊ. ನಾಗರಾಜ್ ಬಿ.ಸಿ. ಮತ್ತು ಪ್ರೊ. ಗುರುರಾಜ ಕೆ.ವಿ., ಲಂಗೂರ್‌ಗಳ ಸಾಮಾಜಿಕ ವ್ಯವಸ್ಥೆ ಕುರಿತು ಡಾ. ಚೇತನ್ ನಾಗ್ ಕೆ.ಎಸ್., ಆನೆಗಳ ಗಸ್ತು ಕುರಿತು ಸಿದ್ಧಾರ್ಥ್ ಶೆಟ್ಟಿ ಹಾಗೂ ವನ್ಯಜೀವಿಗಳ ಮೇಲ್ವಿಚಾರಣೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕುರಿತು ಪ್ರೊ. ವಸಂತ ಕುಮಾರ್ ಮಾತನಾಡಲಿದ್ದಾರೆ.

ಸಮ್ಮೇಳನದ ಸಮಾರೋಪ ಸಮಾರಂಭ ಮೇ 15ರಂದು ಸಂಜೆ 4:30ಕ್ಕೆ ನಡೆಯಲಿದ್ದು, ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ. ಡೇವಿಡ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಜಾ ನಾಯ್ಕ್, ಕುಲಸಚಿವ ಹೇಮಂತ್ ಎನ್., ಭದ್ರಾ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಪುಲ್ಕಿತ್ ಮೀನಾ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರೊ. ವಿಜಯ ಕುಮಾರ ಉಪಸ್ಥಿತರಿರುವರು.















Leave a Reply