
ರಿಪ್ಪನ್ಪೇಟೆ: ಪಟ್ಟಣದ ಸಮೀಪವಿರುವ ಶಿವಮೊಗ್ಗ ರಸ್ತೆಯ ಸಿದ್ದಪ್ಪನಗುಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಕಾರು ಚಾಲಕನ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎದುರಿನಿಂದ ಬರುತ್ತಿದ್ದ ಬೈಕ್ಗೆ ಕಾರು ನೇರವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಪ್ರದೀಪ್ ಎಂದು ಗುರುತಿಸಲಾಗಿದೆ. ಅಪಘಾತದ ಪರಿಣಾಮ ಪ್ರದೀಪ್ ಅವರ ತಲೆ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಮೂಲದವರಿಗೆ ಸೇರಿದ ಟಾಟಾ ಕರ್ವ್ ಕಾರು ರಿಪ್ಪನ್ಪೇಟೆ ಮಾರ್ಗವಾಗಿ ಸಂಚರಿಸುತ್ತಿದ್ದಾಗ, ಸಿದ್ದಪ್ಪನಗುಡಿ ಬಳಿ ಮುಂದಿದ್ದ ಲಾರಿಯನ್ನು ಓವರ್ಟೇಕ್ ಮಾಡಲು ಯತ್ನಿಸಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಕಾರಿನ ಮುಂಭಾಗದ ಗಾಜು ಸಂಪೂರ್ಣ ನಜ್ಜುಗುಜ್ಜಾಗಿದೆ.
ಪ್ರದೀಪ್ ಅವರು ಬಾಳೂರು ಸಮೀಪದ ಕಾಳೇಶ್ವರ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರೆದಿದೆ.

















Leave a Reply