ನವದೆಹಲಿ: ನಾರಿ ಶಕ್ತಿ ವಂದನಾ ಕಾಯ್ದೆಯ ಜಾರಿಗಾಗಿ ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ನಾರಿ ಶಕ್ತಿ ವಂದನಾ ಕಾಯ್ದೆಯ ಕುರಿತು ಪರಿಣಾಮಕಾರಿಯಾಗಿ ಮಾತನಾಡಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಪುನರ್ ಸ್ಥಾಪಿಸಬೇಕೆಂಬ ಅಲ್ಲಿನ ಜನರ ದಶಕಗಳ ಬೇಡಿಕೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಭಾಗದ ಭೌಗೋಳಿಕ ವ್ಯಾಪ್ತಿ ಮತ್ತು ಸವಾಲುಗಳನ್ನು ಪರಿಗಣಿಸಿ, ಮುಂಬರುವ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ, ಈಶಾನ್ಯ ರಾಜ್ಯಗಳಿಗೆ ನೀಡಿರುವಂತೆ, ಪಶ್ಚಿಮ ಘಟ್ಟದ ಹೊಸನಗರಕ್ಕೂ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಆಗ್ರಹಿಸಿ, ಇತ್ತೀಚಿಗೆ ಪೂಜ್ಯ ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ಹೊಸನಗರದಲ್ಲಿ ನಡೆದ ಬೃಹತ್ ಪಾದಯಾತ್ರೆಯನ್ನು ಉಲ್ಲೇಖಿಸಿದ ಸಂಸದ ರಾಘವೇಂದ್ರ, “ಸ್ವತಂತ್ರ ಅಸ್ತಿತ್ವ ಹೊಂದಿದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು 2008ರಲ್ಲಿ ವಿಭಜಿಸಲಾಗಿದ್ದು, ಆ ಭಾಗದ ಜನರಿಗೆ ಪ್ರಾತಿನಿಧ್ಯದ ಕೊರತೆಯನ್ನುಂಟು ಮಾಡಿದೆ. ಶರಾವತಿ, ವಾರಾಹಿಯಂತಹ ನದಿಗಳ ಮೂಲವಾಗಿರುವ, ಮಲೆನಾಡಿನ ಕಠಿಣ ಭೂಪ್ರದೇಶ ಹೊಂದಿರುವ ಹೊಸನಗರಕ್ಕೆ ವಿಶೇಷ ಭೌಗೋಳಿಕ ಮಾನ್ಯತೆ ನೀಡಬೇಕು. ನಾಡಿನ ಅಭಿವೃದ್ಧಿಗಾಗಿ ಐದು ಜಲಾಶಯ ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡಿರುವ ಸಂತ್ರಸ್ತ ಕುಟುಂಬಗಳ ಹಿತದೃಷ್ಟಿಯಿಂದ ಹೊಸನಗರವನ್ನು ಮತ್ತೆ ಸ್ವತಂತ್ರ ಕ್ಷೇತ್ರವನ್ನಾಗಿ ಮಾಡುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಅದು ಆ ಭಾಗದ ಜನರ ತ್ಯಾಗಕ್ಕೆ ನೀಡುವ ನ್ಯಾಯ ಮತ್ತು ಗೌರವ” ಎಂದು ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನಂತಹ ವಿಶಾಲ ಅರಣ್ಯ, ಗಿರಿ-ಪರ್ವತಗಳ ಪ್ರದೇಶ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ ಭಾಗಗಳಿಗೆ, ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ವಿಶೇಷ ಮಾನದಂಡಗಳನ್ನು ಅನುಸರಿಸಬೇಕು ಎಂದು ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

















Leave a Reply