ಮೂರು ಬಾರಿ ಶಾಸಕರಾಗಿರುವ ಬೇಳೂರು ಅವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವು ಇಲ್ಲ |2028ರಲ್ಲಿ ಜನರು ಉತ್ತರ ಕೊಡ್ತಾರೆ
ಸಾಗರ : ತಾಲೂಕಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗೈರು ಹಾಜರಾಗಿರುವ ವಿಚಾರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂತಹ ಮಹತ್ವದ ದಿನದಲ್ಲಿ ಶಾಸಕ ಗೈರಾಗಿರುವುದು ನಿರ್ಲಕ್ಷ್ಯದ ಸೂಚಕ ಎಂದು ತೀವ್ರವಾಗಿ ಖಂಡಿಸಿದರು.

ಮೂರು ಬಾರಿ ಶಾಸಕರಾಗಿರುವ ಬೇಳೂರು ಅವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವು ಇಲ್ಲವೆಂದು ಆರೋಪಿಸಿದ ಅವರು, ಬೇರೆ ಸಂದರ್ಭಗಳಲ್ಲಿ ತುರ್ತು ಕಾರ್ಯಗಳಿಗಾಗಿ ದೆಹಲಿಯಿಂದ ತಕ್ಷಣ ಮರಳುವವರು, ಈ ಸಂದರ್ಭದಲ್ಲಿ ಮಾತ್ರ ಗೈರಾಗಿರುವುದು ವಿಷಾದನೀಯ ಎಂದರು.
ತಾಲೂಕಿನ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಯಾವುದೇ ಸರ್ಕಾರಿ ಕೆಲಸವೂ ಲಂಚವಿಲ್ಲದೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಅಧಿಕಾರದಲ್ಲಿ ಉಳಿಯಲು ಭ್ರಷ್ಟಾಚಾರಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಜನರ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.
“ಹಣ ಇಲ್ಲವೆಂದು ಕಣ್ಣೀರು ಹಾಕಿ ಮತ ಪಡೆದವರು, ಇದೀಗ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜನರಿಗೆ ನೂರು ರೂಪಾಯಿ ಪಡೆದು ಹತ್ತು ರೂಪಾಯಿ ಮಾತ್ರ ಹಿಂತಿರುಗಿಸುವ ನೀತಿ ಬಿಡಬೇಕು. ಇಲ್ಲವಾದರೆ ಜನರು ತಕ್ಕ ಪಾಠ ಕಲಿಸುತ್ತಾರೆ,” ಎಂದು ಕಿಡಿಕಾರಿದರು.
ಇನ್ನೂ ತೀವ್ರವಾಗಿ ಟೀಕಿಸಿದ ಅವರು, “ಕ್ಷೇತ್ರವು ನಿಯಂತ್ರಣ ತಪ್ಪಿದ ಎತ್ತಿನಂತಾಗಿದೆ. ಮುಂದಿನ 2028ರ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ,” ಎಂದು ಹೇಳಿದರು.
ಇದಲ್ಲದೆ, ತಾಲೂಕಿನಲ್ಲಿ ಮದ್ಯಪಾನ ಮಾರಾಟ ಹೆಚ್ಚುತ್ತಿರುವುದಕ್ಕೂ ಶಾಸಕರನ್ನೇ ಹೊಣೆಗಾರರನ್ನಾಗಿ ಮಾಡಿದರು. ಹಳ್ಳಿ ಹಳ್ಳಿಗಳಲ್ಲಿ ಮದ್ಯ ಪೂರೈಕೆ ಹೆಚ್ಚಿದ್ದು, ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮ್ಯಾಮ್ಕೋಸ್ ನಿರ್ದೇಶಕ ಬರಮಪ್ಪ ಮಾತನಾಡಿ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿಯೇ ಗೌರವ ನೀಡಿಲ್ಲ ಎಂದು ಆರೋಪಿಸಿ, ಶಾಸಕ ಬೇಳೂರು ಕೂಡ ಅದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ಅಂಬೇಡ್ಕರ್ ಜಯಂತಿಗೆ ಗೈರಾಗಿರುವುದು ಸಂವಿಧಾನ ಶಿಲ್ಪಿಗೆ ಅವಮಾನವಾಗಿದ್ದು, ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆನಂದಪುರ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಪ್ಪ ಗೌಡ್ರು, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ, ರವಿಕುಮಾರ್ ಸುಬ್ರಮಣ್ಯ ಮತ್ತು ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.















Leave a Reply