ಮೂರು ಪಕ್ಷಗಳ ನಿರ್ಲಕ್ಷ್ಯ| ಹರತಾಳು ಹಾಲಪ್ಪ ಭರವಸೆ
ಹೊಸನಗರ: ಒಂದು ತಿಂಗಳೊಳಗೆ ಹೊಸನಗರಕ್ಕೆ ೧೧೦ ಕೆ.ವಿ ವಿದ್ಯುತ್ ಸ್ಥಾವರ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೊಸನಗರದ ಮೆಸ್ಕಾಂ ಇಲಾಖೆಯ ಮುಂದೆ ಅಥವಾ ತಾಲ್ಲೂಕು ಕಛೇರಿಯ ಮುಂದೆ ಗಂಜಿ ಕೇಂದ್ರ ತೆರೆದು ಗ್ರಾಮಸ್ಥರೊಂದಿಗೆ ಹೋರಾಟ ನಡೆಸುತ್ತೇವೆ ಎಂದು ಕಳೂರು ಸೊಸೈಟಿ ಅಧ್ಯಕ್ಷ ಹಾಗೂ ಸಹಕಾರ ಒಕ್ಕೂಟದ ಸದಸ್ಯ ದುಮ್ಮ ವಿನಯ್ಕುಮಾರ್ ಹೇಳಿದರು. ಹೊಸನಗರದ ಮಾವಿನಕೊಪ್ಪದಿಂದ ತಾಲ್ಲೂಕು ಕಛೇರಿವರೆಗೆ 110 ಕೆ.ವಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಗ್ರಹಿಸಿ ಹೊಸನಗರ ತಾಲ್ಲೂಕು ಸಹಕಾರಿ ಒಕ್ಕೂಟದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ತಹಶೀಲ್ದಾರ್ ಭರತ್ರಾಜ್ ಹಾಗೂ ಕೆ.ಇ.ಬಿ ಇಂಜಿನಿಯರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಯೋಜನೆಗಾಗಿ ಅನೇಕ ಗ್ರಾಮಗಳು ಮುಳುಗಡೆ ಆಗಿ ಜಮೀನು ಕಳೆದುಕೊಂಡು ಸಾವಿರಾರು ರೈತ ಕುಟುಂಬಗಳು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು ವಾಸವಾಗಿದ್ದರೂ ಇನ್ನೂ ಸಮರ್ಪಕ ವಿದ್ಯುತ್ ಸೌಲಭ್ಯ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಸಮಸ್ಯೆ ಮುಂದುವರಿದಿದ್ದು, ಭೂಮಿ ಕಳೆದುಕೊಂಡವರಿಗೆ ಪುನರ್ವಸತಿ ಸಿಗದೇ, ಸಮರ್ಪಕ ಸಂಪರ್ಕವೂ ಇಲ್ಲದೇ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ದೂರಿದರು.
ದಿನನಿತ್ಯ ಬಳಕೆಗೆ ಅಗತ್ಯವಿರುವ ವಿದ್ಯುತ್ ಸರಿಯಾದ ಪ್ರಮಾಣದಲ್ಲಿ ಲಭ್ಯವಿಲ್ಲದೇ ವಿದ್ಯಾರ್ಥಿಗಳಿಗೆ ರಾತ್ರಿ ಓದಲು ತೊಂದರೆ ಉಂಟಾಗುತ್ತಿದೆ. ಗೃಹಬಳಕೆಯ ಸಾಧನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ರೈತರ ಪಂಪ್ಸೆಟ್ಗಳಿಗೆ ವೋಲ್ಟೇಜ್ ಕೊರತೆಯಿಂದ ತೊಂದರೆ ಉಂಟಾಗುತ್ತಿದೆ. ಉದ್ಯಮಿಗಳಿಗೂ ವಿದ್ಯುತ್ ಕೊರತೆಯಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.
ಈ ಸಮಸ್ಯೆ ಪರಿಹಾರಕ್ಕಾಗಿ ತಕ್ಷಣ ೧೧೦ ಕೆ.ವಿ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಬೇಕು. ಯಾವುದೇ ಸಂಘ-ಸಂಸ್ಥೆಗಳು ಹೋರಾಟಕ್ಕೆ ಕರೆ ನೀಡಿದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಮೂರು ಪಕ್ಷಗಳ ನಿರ್ಲಕ್ಷ್ಯ: ವಾಟಗೋಡು ಸುರೇಶ್
೧೧೦ ಕೆ.ವಿ ಸ್ಥಾವರ ಹೋರಾಟ ಸಮಿತಿಯ ನೇತೃತ್ವವಹಿಸಿ ಮಾತನಾಡಿದ ವಾಟಗೋಡು ಸುರೇಶ್, ಕಳೆದ ೬೫ ವರ್ಷಗಳಿಂದ ಹೊಸನಗರದಲ್ಲಿ ವಿದ್ಯುತ್ ಸಮಸ್ಯೆ ಜ್ವಲಂತವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಆಡಳಿತ ನಡೆಸಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆರೋಪಿಸಿದರು. ಶಾಸಕರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದೇ ಸ್ಥಾವರ ಸ್ಥಾಪನೆ ವಿಳಂಬಕ್ಕೆ ಕಾರಣ ಎಂದು ಟೀಕಿಸಿದರು. ಸ್ಥಾವರ ನಿರ್ಮಾಣವಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಹರತಾಳು ಹಾಲಪ್ಪ ಭರವಸೆ: ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರದಲ್ಲಿ ಇಷ್ಟು ದಿನವೂ 110 ಕೆ.ವಿ ವಿದ್ಯುತ್ ಸ್ಥಾವರ ಸ್ಥಾಪನೆಯಾಗದಿರುವುದು ದುರದೃಷ್ಟಕರ. ತಾವು ಅಧಿಕಾರದಲ್ಲಿದ್ದಾಗ ಹರಿದ್ರಾವತಿಯಲ್ಲಿ ೩೩ ಕೆ.ವಿ ಸ್ಥಾವರ ಮಂಜೂರು ಮಾಡಿಸಿದ್ದಾಗಿ ತಿಳಿಸಿದರು. ಸರ್ಕಾರದಿಂದ ನೂತನ ಸ್ಥಾವರಕ್ಕೆ ಮಂಜೂರಾತಿ ದೊರೆತರೆ ಅಗತ್ಯವಿದ್ದಲ್ಲಿ ಕೇಂದ್ರ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ಸಂಸದರ ಮೂಲಕ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ ಜಯರಾಂ, ವಾಟಗೋಡು ಸುರೇಶ್, ಡಿ.ಆರ್. ವಿನಯ್ ಕುಮಾರ್, ಜಿ.ಎಸ್. ಅನಂತರಾವ್ ಗುಬ್ಬಿಗ, ಕಲ್ಯಾಣಪ್ಪ ಗೌಡ, ಮಾಸ್ತಿಕಟ್ಟೆ ಸುಬ್ರಮಣ್ಯ ಮುರುಳಿ, ಜಿ.ಎಸ್. ರವಿ, ಉಮೇಶ್ ಹಾಲಗದ್ದೆ, ಬಾಬು ಕಾಮತ್, ಹಾಲಪ್ಪಗೌಡ್ರು, ಮೀಲ್ ಈಶ್ವರಪ್ಪ, ರಾಜು ಕಾಮತ್, ಜಿ.ಟಿ ಈಶ್ವರಪ್ಪ ಗೌಡ, ಗುಬ್ಬಿಗ ಸುನೀಲ್, ಶ್ರೀಪತಿರಾವ್, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ವಿಜೇಂದ್ರ ಶೇಟ್, ಮಂಡಾಣಿ ಮೋಹನ, ಚಾಲುಕ್ಯ ಬಸವರಾಜ್ ಗಣೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
















Leave a Reply