ಹೊಸನಗರ ಕ್ಷೇತ್ರ ಮರುಸ್ಥಾಪನೆ ಪಾದಯಾತ್ರೆ ಫಲಕಾರಿಯಲ್ಲ; 110 ಕೆ.ವಿ ವಿದ್ಯುತ್ ಯೋಜನೆಗೆ ಹೋರಾಟ ನಡೆಸಿ
ಹೊಸನಗರ: ಹೊಸನಗರ ಕ್ಷೇತ್ರ ಮರುಸ್ಥಾಪನೆಗಾಗಿ ಏಪ್ರಿಲ್ 5 ಮತ್ತು 6 ರಂದು ಕೈಗೊಳ್ಳಲಿರುವ ಪಾದಯಾತ್ರೆಯಿಂದ ಯಾವುದೇ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಜನಹಿತ ರಂಗದ ರಾಜ್ಯ ಸಂಚಾಲಕ ವಾಟಗೋಡು ಸುರೇಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿಧಾನಸಭಾ ಕ್ಷೇತ್ರ ಪುನರ್ವಿಂಗಡಣೆ ಕುರಿತು ಯಾವುದೇ ಅಧಿಕೃತ ಪ್ರಸ್ತಾವನೆಯೇ ಇಲ್ಲ. ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಬಾರದಿರುವಾಗ ಪಾದಯಾತ್ರೆ ಹಾಗೂ ಹೋರಾಟ ನಡೆಸುವುದರಿಂದ ಪ್ರಯೋಜನವಿಲ್ಲ. ಜನರ ಹಕ್ಕೊತ್ತಾಯದ ಮನವಿಯನ್ನು ಯಾರಿಗೆ ಸಲ್ಲಿಸಬೇಕು ಎಂಬುದೇ ಸ್ಪಷ್ಟವಿಲ್ಲ ಎಂದು ಪ್ರಶ್ನಿಸಿದರು.
2004ರಿಂದ 2008ರವರೆಗೆ ಕ್ಷೇತ್ರ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆದಿದ್ದರೂ, ಅಂದಿನ ಆಯೋಗದ ಮುಂದೆ ವಾದ ಮಂಡಿಸಿದರೂ ಪ್ರಯೋಜನವಾಗಲಿಲ್ಲ. ಆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಮರ್ಪಕ ಪ್ರಯತ್ನ ಮಾಡಲಿಲ್ಲ ಎಂದು ಆರೋಪಿಸಿದರು.
ಇಂದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷಗಳು ಪರಸ್ಪರ ವಿರೋಧದಲ್ಲಿವೆ. ಕ್ಷೇತ್ರ ಮರುವಿಂಗಡಣೆಗೆ ರಾಜಕೀಯ ಮಟ್ಟದಲ್ಲಿ ಒತ್ತಡ ಹೇರುವ ಬದಲು ಜನರನ್ನು ದಿಕ್ಕುತಪ್ಪಿಸುವ ರೀತಿಯಲ್ಲಿ ಪಾದಯಾತ್ರೆ ನಡೆಸುತ್ತಿರುವುದು ಸಮಂಜಸವಲ್ಲ ಎಂದು ಟೀಕಿಸಿದರು.
ಹೊಸನಗರ ಕ್ಷೇತ್ರ ಇಲ್ಲದ ಕಾರಣ ಅಭಿವೃದ್ಧಿ ಆಗಿಲ್ಲ ಎಂಬ ಆರೋಪ ನಿಜವಾದರೆ, ಅದಕ್ಕೆ ಸಂಬಂಧಪಟ್ಟ ಇಬ್ಬರು ಶಾಸಕರ ವೈಫಲ್ಯವೇ ಕಾರಣ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಿಜವಾದ ಹೋರಾಟ ನಡೆಸಬೇಕಾದರೆ, ಮುಖಂಡರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಲಿ ಎಂದು ಸವಾಲು ಹಾಕಿದರು.
ಪಶ್ಚಿಮಘಟ್ಟ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದ ಅವರು, ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿ ಕ್ಷೇತ್ರ ಮರುವಿಂಗಡಣೆ ವೇಳೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಶಿವಮೊಗ್ಗ ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವಾಗಿ ರೂಪಿಸಿ ತಾಲೂಕುಗಳನ್ನು ಪ್ರತ್ಯೇಕ ಕ್ಷೇತ್ರಗಳನ್ನಾಗಿ ಮಾಡಿದರೆ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.
ಇದಲ್ಲದೆ, ಹೊಸನಗರ ತಾಲ್ಲೂಕಿನಲ್ಲಿ ದಶಕಗಳಿಂದ ಮುಂದುವರಿದಿರುವ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ರೈತರ ತೋಟಗಳಿಗೆ ನೀರಿನ ಕೊರತೆ, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಮಳೆ ಅಥವಾ ಗುಡುಗು ಬಂದರೆ ಹಗಲಿರುಳು ವಿದ್ಯುತ್ ಕಡಿತವಾಗುತ್ತದೆ. ಆದ್ದರಿಂದ ರಾಜಕೀಯ ಮುಖಂಡರು 110 ಕೆ.ವಿ ವಿದ್ಯುತ್ ಘಟಕಕ್ಕಾಗಿ ಹೋರಾಟ ನಡೆಸಬೇಕು. ಪ್ರಯೋಜನವಿಲ್ಲದ ಹೋರಾಟಗಳಿಂದ ಜನರನ್ನು ತಪ್ಪು ದಾರಿಗೆಳೆಯಬಾರದು ಎಂದು ಅವರು ಹೇಳಿದರು.















Leave a Reply