ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ: ನರೇಂದ್ರಕುಮಾರ್

Addaheading 20261008 000248 0000 ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ: ನರೇಂದ್ರಕುಮಾರ್
Spread the love

ಹೊಸನಗರ: ಮಲೆನಾಡಿನಲ್ಲಿ ಜೂನ್‌ನಿಂದ ಮಳೆಗಾಲ ಆರಂಭವಾಗಬೇಕಿದ್ದರೂ ಅಕ್ಟೋಬರ್‌ ತಿಂಗಳು ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿಯೂ ಮಳೆ ಕೊರತೆಯಾದರೆ ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸೂಚಿಸಿದರು.

   ಹೊಸನಗರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಈ ಬಾರಿ ಕುಡಿಯುವ ನೀರಿನ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಗ್ರಾಮಗಳಲ್ಲಿ ನೀರಿನ ಲಭ್ಯತೆ, ಮೂಲಗಳ ಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಯಾವುದೇ ಸಮಸ್ಯೆಯಿದ್ದರೂ ಟಾಸ್ಕ್‌ಫೋರ್ಸ್ ಸಮಿತಿಯ ಗಮನಕ್ಕೆ ತನ್ನಿ:

ರಾಜ್ಯದಲ್ಲಿ ಬರದ ಛಾಯೆ ದಟ್ಟವಾಗಿದ್ದು, ತಾಲ್ಲೂಕಿನಲ್ಲಿನ ಸಮಸ್ಯೆಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಅದರಂತೆ ಹೊಸನಗರ ತಾಲ್ಲೂಕಿನ ಪರಿಸ್ಥಿತಿಯ ವರದಿ ಸಿದ್ಧಪಡಿಸಬೇಕಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಟಾಸ್ಕ್‌ಫೋರ್ಸ್ ಸಮಿತಿಯ ಗಮನಕ್ಕೆ ತರಬೇಕು. ಕೊನೆಯ ಕ್ಷಣದಲ್ಲಿ ಸಮಸ್ಯೆ ಉಲ್ಬಣವಾದ ಬಳಿಕ ಕ್ರಮ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ನರೇಂದ್ರಕುಮಾರ್ ತಿಳಿಸಿದರು.
  ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾದರೆ, ಮುನ್ನೆಚ್ಚರಿಕೆ ವಹಿಸದಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರರಾಗಬೇಕಾಗುತ್ತದೆ. ಹೀಗಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
  ಪ್ರತಿಯೊಂದು ಗ್ರಾಮ ಪಂಚಾಯಿತಿಯ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲೇ ವಾಸವಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಗ್ರಾಮಸ್ಥರಿಗೆ ಯಾವುದೇ ತೊಂದರೆ ಎದುರಾದರೂ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
   ಎಲ್ಲಾ ಪಿಡಿಒಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಸಣ್ಣ ಸಮಸ್ಯೆಯೊಂದು ಉಂಟಾದರೂ ಅದು ಇಡೀ ತಾಲ್ಲೂಕಿಗೆ ಕೆಟ್ಟ ಹೆಸರು ತರುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ನರೇಂದ್ರಕುಮಾರ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!