
ರಿಪ್ಪನ್ ಪೇಟೆ : ಸಮೀಪದ ಹುಂಚದ ಅತಿಶಯ ಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳ 44ನೇ ಜನ್ಮದಿನವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತವೃಂದದವರು ಭಕ್ತಿಭಾವದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು, “ಹೊಂಬುಜ ಧರ್ಮಪೀಠವು ಚತುರ್ವಿಧ ದಾನ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಹೊಂಬುಜ ಅತಿಶಯ ಕ್ಷೇತ್ರ, ಕುಂದಾದ್ರಿ ಕ್ಷೇತ್ರ, ವರಂಗ ಕ್ಷೇತ್ರ, ಹಟ್ಟಿಯಂಗಡಿ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ನಿರಂತರ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಸಮಾಜಬಾಂಧವರ ಹಾಗೂ ಸರ್ಕಾರದ ಸಹಕಾರದಿಂದ ಈ ಕಾರ್ಯಗಳು ಯಶಸ್ವಿಯಾಗಿ ಸಾಗುತ್ತಿವೆ” ಎಂದು ತಿಳಿಸಿದರು.

“ಶೈಕ್ಷಣಿಕ ಪ್ರಗತಿಯಿಂದ ಸಮಾಜದಲ್ಲಿ ಸರ್ವರಿಗೂ ಜ್ಞಾನ ಬೆಳೆಯಬೇಕು. ಯುವಜನರು ರಾಷ್ಟ್ರಸೇವೆಯಲ್ಲಿ ತೊಡಗಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು” ಎಂದು ಮಹಾಸ್ವಾಮೀಜಿಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಹಾಗೂ ಅಭೀಷ್ಟವರ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಆಶೀರ್ವಾದ ನೀಡಲಾಯಿತು ಹಾಗೂ ದೀಕ್ಷಾಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಹಾಗೂ ಪೂರ್ವ ಭಟ್ಟಾರಕರಾದ ಸ್ವಸ್ತಿಶ್ರೀ ಅರಹದ್ದಾಸ ಸಾಗರ ಸ್ವಾಮೀಜಿಗಳನ್ನು ಸ್ಮರಿಸಿ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಗೌರವ ಸಲ್ಲಿಸಲಾಯಿತು.
ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಹಾಗೂ ಶ್ರೀ ಕ್ಷೇತ್ರಪಾಲ ಸ್ವಾಮಿಗಳಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.













Leave a Reply