ಸೆ.19ರಂದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್|ಹೊಸನಗರದ  ಗಾಂಧಿ ಮಂದಿರದಲ್ಲಿ ಸುದ್ದಿಗೋಷ್ಠಿ

Addaheading 20260917 205648 0000 ಸೆ.19ರಂದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್|ಹೊಸನಗರದ  ಗಾಂಧಿ ಮಂದಿರದಲ್ಲಿ ಸುದ್ದಿಗೋಷ್ಠಿ
Spread the love

ಹೊಸನಗರ: ಶಿವಮೊಗ್ಗ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ಜಾರಿಯಿಂದ ಉಂಟಾಗುವ ಪರಿಣಾಮಗಳ ಕುರಿತು ಸಾಗರ-ಹೊಸನಗರ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಸಾಧಕ-ಬಾಧಕಗಳ ಚರ್ಚೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೇ ಮಾಡಿ ಎಂದು ಮುಖ್ಯಮಂತ್ರಿಗಳ ಮನ ಒಲಿಸಿದ್ದರಿಂದ ರೈತರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಸೆ.19ರಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಹೊಸನಗರ ತಾಲೂಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣರವರ ನೇತೃತ್ವದಲ್ಲಿ ಸುಮಾರು 5ಸಾವಿರ ರೈತರು ಮುಖ್ಯಮಂತ್ರಿಗಳ ಸಭೆಗೆ ಬರಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡರವರು ತಿಳಿಸಿದರು.
ಹೊಸನಗರದ ಕಾಂಗ್ರೆಸ್ ಕಛೇರಿ ಗಾಂಧಿಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.

   ಕೇಂದ್ರ ಸರ್ಕಾರ 7ನೇ ಬಾರಿಗೆ ಜಾರಿಗೆ ತರಲು ಹೊರಟಿರುವ ಕಸ್ತೂರಿ ರಂಗನ್ ವರದಿಯ ಬಗ್ಗೆ ತೀರ್ಥಹಳ್ಳಿಯ ಪದವಿಪೂರ್ವ ಕಾಲೇಜಿನಲ್ಲಿ ರೈತರೊಂದಿಗೆ ಸಂವಾದ ಹಾಗೂ ಅನಂತಮೂರ್ತಿ ಪ್ರೌಢ ಶಾಲೆ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
   ಮಲೆನಾಡಿನ ರೈತರು ಕೃಷಿ ಕಾರ್ಮಿಕರು ಹಾಗೂ ಸ್ಥಳೀಯ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಮಾಹಿತಿ ನೀಡಲಿದ್ದಾರೆ ಎಂದರು.

   ಸೆ. 21ರಿಂದ 23ರವರೆವಿಗೆ ವಿಶೇಷ ಅಧಿವೇಶನವೂ ನಡೆಯಲಿದ್ದು ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸುವ ಪ್ರಕ್ರಿಯೆಯ ಭಾಗವಾಗಿ ಈ ಸಭೆ ಮುಖ್ಯವಾಗಿರುತ್ತದೆ ಎಂದರು.

   ಸೆ.19ರಂದು ನಡೆಯುವ ಸಭೆಗೆ ಹೊಸನಗರ ತಾಲೂಕಿನ ಎಲ್ಲ ರೈತರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡುವುದರ ಜೊತೆಗೆ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ನಮ್ಮ ತಾಲೂಕಿನಿಂದ ಓಡಿಸೋಣ ಎಂದರು.

ಈ ಪತ್ರಿಕಾ ಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಪಿ ಚಿದಂಬರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಶ್ರೇಷ್ಠಿ, ಜಯಶೀಲಪ್ಪ ಗೌಡ, ಪ್ರಭಾಕರ್, ಅಶ್ವಿನಿಕುಮಾರ್, ಜಯನಗರ ಗುರು, ಶುಭಾಕರ, ಗೋಪಾಲ್, ಉಬೈದುಲ್ಲಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!