ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಅವರು ಶ್ರೀಕ್ಷೇತ್ರಕ್ಕೆ ಭೇಟಿ
ರಿಪ್ಪನ್ ಪೇಟೆ : ಶರನ್ನವರಾತ್ರಿ ಹಾಗೂ ವಿಜಯದಶಮಿಯ ಎಂಟನೇ ದಿನದಂದು ಜೈನಾಗಮ ಪರಂಪರೆಯಂತೆ ಹೊಂಬುಜ ಜೈನ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಪರ್ವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಮಂಗಲ ಪ್ರವಚನ ನೀಡಿ, ಸಕಲ ಜೀವಿಗಳಲ್ಲಿ ಜೀವಕಾರಣ್ಯ ಭಾವ ಬೆಳೆಸುವ ಮೂಲಕ ಅಹಿಂಸಾ ತತ್ವವನ್ನು ವೃದ್ಧಿಸಿ, ಮೈತ್ರಿಭಾವವನ್ನು ಮೂಡಿಸಬೇಕು ಎಂದು ತಿಳಿಸಿದರು.
ದ್ವೇಷ, ಅಸೂಯೆ ಹಾಗೂ ಹಿಂಸೆಯನ್ನು ತೊರೆದು ಪರಸ್ಪರ ಅನ್ಯೋನ್ಯತೆಯಿಂದ ಗೌರವಪೂರ್ವಕವಾಗಿ ಜೀವನ ನಡೆಸಿದಾಗ ಬದುಕು ಪಾವನವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಹಾಗೂ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಗೆ ಕುಮುದ್ವತಿ ತೀರ್ಥದಿಂದ ಅಭಿಷೇಕ ಜರುಗಿತು. ವಿವಿಧ ಫಲಪುಷ್ಪಗಳಿಂದ ದೇವರ ಸನ್ನಿಧಿಯನ್ನು ಅಲಂಕರಿಸಿ, ಭಕ್ತರು ವಿವಿಧ ಧಾನ್ಯಗಳನ್ನು ಸಮರ್ಪಿಸಿದರು. ಸಾತ್ವಿಕ ಆಹಾರ ಸೇವನೆಯು ದೇಹಕ್ಕೆ ಪೌಷ್ಟಿಕಾಂಶ ಒದಗಿಸಿ ಆರೋಗ್ಯವನ್ನು ಕಾಪಾಡುತ್ತದೆ ಎಂದು ಶ್ರೀಗಳು ಆಶಿಸಿದರು.
ಶ್ರೀ ನೇಮಿನಾಥ ತೀರ್ಥಂಕರರು, ಶ್ರೀ ಮಹಾವೀರ ತೀರ್ಥಂಕರರು, ಶ್ರೀ ಆದಿನಾಥ ತೀರ್ಥಂಕರರು, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಊರಿನ ಹಾಗೂ ಪರವೂರಿನ ಭಕ್ತರು ಶ್ರೀಕ್ಷೇತ್ರದ ಜಿನಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಭೋಗಾರ ಬಸದಿ, ಮಕ್ಕಳ ಬಸದಿ ಹಾಗೂ ತ್ರಿಕೂಟ ಜಿನಾಲಯಗಳಲ್ಲಿ ಪರಂಪರಾಗತ ಪೂಜಾ ವಿಧಿವಿಧಾನಗಳು ಜರುಗಿದವು.
ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಅವರು ಶ್ರೀಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಅವರನ್ನು ಗೌರವಿಸಿ, ಸನ್ಮಾನಿಸಿ ಶ್ರೀಫಲ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಪೂಜಾ ಸೇವಾಕರ್ತರಾದ ಗ್ವಾಲಿಯರ್ನ ಶ್ರೀ ಮಹೇಶ್ ಶೇಟ್ ಕುಟುಂಬದವರಿಗೂ ಶ್ರೀಗಳು ಆಶೀರ್ವಾದ ನೀಡಿದರು. ರಾತ್ರಿ ನಡೆದ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಸಂಗೀತ, ಸ್ತುತಿ, ನೃತ್ಯ, ವಿವಿಧ ವಾದ್ಯವೈವಿಧ್ಯ ಹಾಗೂ ಗದ್ಯವಾಚನದ ಮೂಲಕ ಭಕ್ತರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿದರು.
















Leave a Reply