ಹೊಂಬುಜದಲ್ಲಿ ಮೂರನೇ ದಿನದ ಶರನ್ನವರಾತ್ರಿ |ಆಧ್ಯಾತ್ಮಿಕ ಭಕ್ತಿಯಿಂದ ಜ್ಞಾನ, ಸಂಪತ್ತು, ಆರೋಗ್ಯ ವೃದ್ಧಿ: ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ

Addaheading 20261013 204925 0000 ಹೊಂಬುಜದಲ್ಲಿ ಮೂರನೇ ದಿನದ ಶರನ್ನವರಾತ್ರಿ |ಆಧ್ಯಾತ್ಮಿಕ ಭಕ್ತಿಯಿಂದ ಜ್ಞಾನ, ಸಂಪತ್ತು, ಆರೋಗ್ಯ ವೃದ್ಧಿ: ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ
Spread the love

ರಿಪ್ಪನ್ ಪೇಟೆ : ಶರನ್ನವರಾತ್ರಿ–ವಿಜಯದಶಮಿ ಪರ್ವದ ಅಂಗವಾಗಿ ಮೂರನೇ ದಿನದಂದು ಹೊಂಬುಜದ ಅತಿಶಯ ಶ್ರೀಕ್ಷೇತ್ರದಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಲೋಕಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು.

ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ರಜತ ಕಲಶದಲ್ಲಿ ಸಂಗ್ರಹಿಸಲಾದ ಅರ್ಘ್ಯೋದಕವನ್ನು ಶ್ರೀ ಕುಂದಕುಂದ ಗುರುಕುಲದ ವಿದ್ಯಾರ್ಥಿಗಳು ಹಾಗೂ ಶ್ರೀ ಪದ್ಮಾವತಿ ಮಹಿಳಾ ಮಂಡಳಿಯ ಶ್ರಾವಿಕೆಯರು ವಾದ್ಯಗೋಷ್ಠಿಯೊಂದಿಗೆ ಸನ್ನಿಧಿಗೆ ತರಲಾಯಿತು. ಬಳಿಕ ಷೋಡಶೋಪಚಾರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು, ಆಧ್ಯಾತ್ಮಿಕ ಭಕ್ತಿಯಿಂದ ಪೂಜಾ ವಿಧಿವಿಧಾನಗಳಲ್ಲಿ ತ್ರಿಕರಣಪೂರ್ವಕವಾಗಿ ಪಾಲ್ಗೊಳ್ಳುವುದು ಹಾಗೂ ಜಿನನಾಮ ಸ್ತುತಿಯನ್ನು ಪಠಿಸುವುದರಿಂದ ಅಂತರಂಗದಲ್ಲಿ ಚೈತನ್ಯ ಮೂಡುತ್ತದೆ ಎಂದು ತಿಳಿಸಿದರು.

ಜ್ಞಾನ, ಸಂಪತ್ತು ಮತ್ತು ಆರೋಗ್ಯ ವೃದ್ಧಿಗಾಗಿ ಭಕ್ತಿಯ ಫಲ ಎಲ್ಲರಿಗೂ ಲಭಿಸಲಿ ಎಂದು ಆಶೀರ್ವದಿಸಿದರು. ಧರ್ಮದ ಪ್ರಭಾವನೆ ಮತ್ತು ರಕ್ಷಣೆಯ ಮಹತ್ವವನ್ನೂ ವಿವರಿಸಿದರು.

ವರ್ಣರಂಜಿತ ಹೂವುಗಳಿಂದ ಅಲಂಕರಿಸಲ್ಪಟ್ಟ ಶ್ರೀ ಪದ್ಮಾವತಿ ದೇವಿಯ ದಿವ್ಯ ಅಲಂಕಾರ ಭಕ್ತರ ಗಮನ ಸೆಳೆಯಿತು. ಸೇವಾಕರ್ತರಾದ ಹುಬ್ಬಳ್ಳಿಯ ಶ್ರೀಮತಿ ಭೂಮಿಕಾ ಎಸ್. ಸಾಂಗ್ಲಿ ಹಾಗೂ ಸಂತೋಷ್ ಬಿ. ಸಾಂಗ್ಲಿ ಕುಟುಂಬದವರನ್ನು ಶ್ರೀಗಳು ಗೌರವಿಸಿ ಹರಸಿದರು.

ರಾತ್ರಿ ಅಷ್ಟಾವಧಾನಪೂರ್ವಕ ಪೂಜಾ ವಿಧಿವಿಧಾನಗಳು, ನೃತ್ಯ, ವಾದ್ಯ ಹಾಗೂ ಗದ್ಯಸೇವೆಗಳು ನಡೆದವು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಹಾಗೂ ನಾಗಸನ್ನಿಧಿಯಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಅಭಿಷೇಕ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿದವು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು.

Leave a Reply

Your email address will not be published. Required fields are marked *

error: Content is protected !!