ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಉತ್ತಮ ಸ್ಥಾನಮಾನ ಲಭ್ಯ: ಶಾಸಕ ಬೇಳೂರು

Addaheading 20261009 181425 0000 ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಉತ್ತಮ ಸ್ಥಾನಮಾನ ಲಭ್ಯ: ಶಾಸಕ ಬೇಳೂರು
Spread the love

ರಿಪ್ಪನ್‌ಪೇಟೆ: ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ವಿಚಾರಶಕ್ತಿ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವುದರ ಜತೆಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಲು ನೆರವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ, ಶ್ರದ್ಧೆಯಿಂದ ಅಭ್ಯಾಸ ಮಾಡಿ ಪೋಷಕರಿಗೆ ಹಾಗೂ ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಕೀರ್ತಿ ತರಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.

   ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ಯುವ ರೆಡ್‌ಕ್ರಾಸ್‌, ರೆಡ್‌ರಿಬ್ಬನ್‌ ಹಾಗೂ ರೋವರ್ಸ್‌-ರೇಂಜರ್ಸ್‌ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

   ವಿದ್ಯಾರ್ಥಿ ಜೀವನ ಮತ್ತೆ ಮರಳಿ ಬಾರದ ಅಮೂಲ್ಯ ಸಮಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ಜ್ಞಾನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಸಾಕಷ್ಟು ಶ್ರಮಿಸುತ್ತಿದ್ದು, ಅವರ ತ್ಯಾಗವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಉತ್ತಮ ಸಾಧನೆಗೆ ಮುಂದಾಗಬೇಕು ಎಂದರು.

   ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಅಂತಹ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದವರಿಗೆ ವೈಯಕ್ತಿಕವಾಗಿ ₹10 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು. ಹೆಣ್ಣು ಮಕ್ಕಳು ದೇಶದ ಆಸ್ತಿ. ಅವರನ್ನು ಗೌರವದಿಂದ ಕಾಣುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಲ್.ರಾಜು ವಹಿಸಿದ್ದರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಬಿ. ಗಣಪತಿ ಉತ್ತುಂಗ ವಿಶೇಷ ಉಪನ್ಯಾಸ ನೀಡಿದರು.

  ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರತ್ನಾಕುಮಾರಿ ಎಸ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

   ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಉಪಾಧ್ಯಕ್ಷ ಆರ್.ಎಚ್.ಶ್ರೀನಿವಾಸ ಅಚಾರ್, ಗ್ಯಾರಂಟಿ ಸಮಿತಿ ಸದಸ್ಯ ರವೀಂದ್ರ, ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಹರತಾಳು, ಸಿಡಿಸಿ ಸದಸ್ಯರಾದ ಪಿಯೂಸ್ ರೋಡ್ರಿಗಸ್, ಹರ್ಷ, ರಮೇಶ್ ಪ್ಯಾನ್ಸಿ, ವಿಜೇಂದ್ರ ಪಿ. ಹಿರಗ್ಗಿ, ರಾಘವೇಂದ್ರ ಕೆ.ಸಿ., ಯೋಗೀಶ್ ಬೆಳ್ಳೂರು, ವಿದ್ಯಾರ್ಥಿ ಪ್ರತಿನಿಧಿ ಎಂ. ಕಾವ್ಯ, ಎಸ್.ಎನ್.ಜೀವನ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪವಿತ್ರ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕ ಕುಮಾರ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಅಂಜನಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!