ಹೊಸನಗರ: ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕನಾಗಿ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಹಲವು ಮೌಲ್ಯಗಳು ಹಾಗೂ ತತ್ವಗಳ ಮೂಲಕ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೊಸನಗರ ತಹಶೀಲ್ದಾರ್ ಭರತ್‌ರಾಜ್ ಹೇಳಿದರು.
ಹೊಸನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಸರಳತೆ, ಸತ್ಯ ಮತ್ತು ಅಹಿಂಸೆಯ ತತ್ವಗಳು ದೇಶದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರಿವೆ. ಸತ್ಯ ಯಾವುದೇ ಸಂದರ್ಭದಲ್ಲೂ ತ್ಯಜಿಸಬಾರದ ಮೌಲ್ಯ ಎಂಬ ನಂಬಿಕೆಯನ್ನು ಗಾಂಧೀಜಿ ತಮ್ಮ ಜೀವನದ ಮೂಲಕ ತೋರಿಸಿಕೊಟ್ಟರು ಎಂದು ಹೇಳಿದರು.
ಅಹಿಂಸೆಯು ಗಾಂಧೀಜಿಯವರ ಮತ್ತೊಂದು ಪ್ರಮುಖ ತತ್ವವಾಗಿದ್ದು, ದೈಹಿಕ ಹಿಂಸೆಯಷ್ಟೇ ಅಲ್ಲದೆ ಆಲೋಚನೆ, ಮಾತು ಮತ್ತು ಕೃತಿಯಲ್ಲಿಯೂ ಹಿಂಸೆಯನ್ನು ತೊರೆಯಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು. ಸತ್ಯಕ್ಕಾಗಿ ಹೋರಾಡುವಾಗ ಹಿಂಸೆಯ ಮಾರ್ಗವನ್ನು ಅನುಸರಿಸದೆ ಸತ್ಯಾಗ್ರಹದ ಮೂಲಕ ಹೋರಾಟ ನಡೆಸಿದ ಗಾಂಧೀಜಿ, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ತೋರಿಸಿದರು ಎಂದು ಭರತ್‌ರಾಜ್ ತಿಳಿಸಿದರು.
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ ಮತ್ತು ದೇಶಸೇವೆಯ ಆದರ್ಶಗಳನ್ನು ಇಂದಿನ ಪೀಳಿಗೆಯವರು ಜೀವನದಲ್ಲಿ ಅಳವಡಿಸಿಕೊಂಡು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಕರೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್ ಎಂ.ಎನ್. ಮಾತನಾಡಿ, ಗಾಂಧೀಜಿಯವರ ತತ್ವಾದರ್ಶಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಂತೋಷದ ಬದುಕು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಮಂಜುನಾಥ್, ಶೃತಿ, ಆಸ್ಮಾ, ಪರಶುರಾಮ್, ಗಿರೀಶ್, ನವೀನ್, ಬಸವರಾಜ್, ನೇತ್ರಾವತಿ, ಅಕ್ಷತಾ, ಅಮೃತ, ವರುಣ್, ಸಂಧ್ಯಾ, ಚಂದ್ರಪ್ಪ, ಸರೋಜ ಸೇರಿದಂತೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಭಾಗವಹಿಸಿದ್ದರು.
















Leave a Reply