ಹೊಂಬುಜ: ಪ್ರತಿಯೊಬ್ಬ ವ್ಯಕ್ತಿಯೂ ಶಾರೀರಿಕವಾಗಿ ಬಲವಂತರಾಗಿ, ನಿರೋಗಿಯಾಗಿ ಬಾಳಲು ಸಾತ್ವಿಕ ಆಹಾರ, ಸತ್ಚಿಂತನೆ ಹಾಗೂ ಬ್ರಹ್ಮಚರ್ಯ ವ್ರತಪಾಲನೆ ಅತ್ಯಗತ್ಯ ಎಂದು ಹೊಂಬುಜ ಜೈನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನುಡಿದರು.
ಇಲ್ಲಿನ ಅತಿಶಯ ಕ್ಷೇತ್ರ ಹೊಂಬುಜದಲ್ಲಿ ಆಯೋಜಿಸಲಾಗಿದ್ದ ಪರ್ಯೂಷಣ ಪರ್ವದ 10ನೇ ದಿನದ ಧಾರ್ಮಿಕ ಸಭೆಯಲ್ಲಿ ‘ಉತ್ತಮ ಬ್ರಹ್ಮಚರ್ಯ’ ಗುಣಧರ್ಮದ ಕುರಿತು ಅವರು ಆಶೀರ್ವಚನ ನೀಡಿದರು.
ನಾವು ಸೇವಿಸುವ ಆಹಾರ ಮತ್ತು ನಮ್ಮ ನಿತ್ಯದ ಸದ್ವರ್ತನೆಗಳು ಮನಸ್ಸನ್ನು ಪ್ರಶಾಂತವಾಗಿಡಲು ನೆರವಾಗುತ್ತವೆ. ಯೋಗ, ಧ್ಯಾನ ಹಾಗೂ ಬ್ರಹ್ಮಚರ್ಯದ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಎರಡೂ ದೃಢವಾಗುತ್ತವೆ; ಇದು ಸಂಸ್ಕಾರಯುತ ಬದುಕಿಗೆ ದಿವ್ಯೌಷಧದಂತೆ ಕೆಲಸ ಮಾಡುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಪರ್ವದ ಅಂಗವಾಗಿ ಬೆಳಿಗ್ಗೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಜಿನಾಗಮೋಕ್ತವಾಗಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು. ಬಳಿಕ ಶ್ರೀ ಚಂದ್ರಶಾಲೆಯಲ್ಲಿ ಶ್ರೀ ಅನಂತನಾಥ ತೀರ್ಥಂಕರರ ನೋಂಪಿಯ ಪೂಜಾ ಕಾರ್ಯಕ್ರಮಗಳು ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಭಕ್ತಿಭಾವದಿಂದ ಸಂಪನ್ನಗೊಂಡವು.
ಕಾರ್ಯಕ್ರಮದಲ್ಲಿ ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಲದ ಸದಸ್ಯರು ಹಾಗೂ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡು ಜಿನಸ್ತುತಿ ನೆರವೇರಿಸಿದರು. ಸಮಾರಂಭದ ಕೊನೆಯಲ್ಲಿ ಭಕ್ತರಿಗೆ ಪೂಜ್ಯ ಶ್ರೀಗಳು ಶ್ರೀಫಲ ಮತ್ತು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
















Leave a Reply