185 ರನ್ಗಳ ಗುರಿ ಬೆನ್ನಟ್ಟಿ 4 ವಿಕೆಟ್ಗಳ ರೋಚಕ ಗೆಲುವು; ಶಿವಮೊಗ್ಗ ಜಿಲ್ಲೆಯ ಕ್ರೀಡಾ ಇತಿಹಾಸಕ್ಕೆ ಮತ್ತೊಂದು ಹೆಮ್ಮೆಯ ಅಧ್ಯಾಯ
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಮಹಾರಾಜ ಟ್ರೋಫಿ KSCA ಟಿ20–2026ರ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡವು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 185 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಐತಿಹಾಸಿಕ ಸಾಧನೆಯೊಂದಿಗೆ ಶಿವಮೊಗ್ಗ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಸೇರ್ಪಡೆಯಾಗಿದೆ.
ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಶಾಸಕರು, ವಿಧಾನ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿರ್ದೇಶಕರಾದ ಶ್ರೀ ಡಿ.ಎಸ್. ಅರುಣ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಡಿ.ಎಸ್. ಅರುಣ್ ಅವರು, “ಶಿವಮೊಗ್ಗ ಯೋಧಾಸ್ ತಂಡದ ಈ ಅದ್ಭುತ ಸಾಧನೆ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬ ಕ್ರೀಡಾಭಿಮಾನಿಗೂ ಹೆಮ್ಮೆಯ ಕ್ಷಣವಾಗಿದೆ. ಈ ಗೆಲುವು ತಂಡದ ಆಟಗಾರರ ಪರಿಶ್ರಮ, ತರಬೇತುದಾರರ ಮಾರ್ಗದರ್ಶನ ಹಾಗೂ ತಂಡದ ಸಮರ್ಪಣೆಯ ಫಲವಾಗಿದೆ. ಮಹಾರಾಜ ಟ್ರೋಫಿಯಂತಹ ಪ್ರತಿಷ್ಠಿತ ಟೂರ್ನಿಗಳು ರಾಜ್ಯದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಇಲ್ಲಿಂದ ಹೊರಹೊಮ್ಮುವ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಲಿ” ಎಂದು ಶುಭ ಹಾರೈಸಿದರು.
ತಂಡದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ, ಫ್ರಾಂಚೈಸಿ ಆಡಳಿತ ಮಂಡಳಿ ಹಾಗೂ ಶಿವಮೊಗ್ಗ KSCA ತಂಡದ ಎಲ್ಲ ಪದಾಧಿಕಾರಿಗಳ ಶ್ರಮವನ್ನು ಶ್ಲಾಘಿಸಿದ ಅವರು, ಈ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.















Leave a Reply