ರಾಷ್ಟ್ರೀಯ ವಸತಿ ಶಾಲೆಯ ಬೆಳ್ಳಿ ಹಬ್ಬ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಕೋಣಂದೂರು: ‘ನಾಯಕತ್ವ ಒಂದು ಜವಾಬ್ದಾರಿಯೇ ಹೊರತು ಅದು ಅಧಿಕಾರವಲ್ಲ. ನಾಯಕನಾದವನು ನಾಯಕರನ್ನು ಸೃಷ್ಟಿಸಬೇಕೇ ಹೊರತು ತನ್ನ ಹಿಂದೆ ಬರುವ ಗುಲಾಮರನ್ನು ಸೃಷ್ಟಿಸಬಾರದು’ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.
ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯಲ್ಲಿ ನಡೆದ ‘ಬೆಳ್ಳಿ ಹಬ್ಬದ ಉದ್ಘಾಟನೆ ,ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ’ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ಎಲ್ಲಿ ಹುಟ್ಟಬೇಕು ಎಂಬುದು ನಮ್ಮ ಕೈಯಲ್ಲಿ ಇಲ್ಲ. ನಾವು ಎಲ್ಲಿಗೆ ಮುಟ್ಟಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಆ ಗುರಿ ಸಾಧನೆಗೆ ನಮ್ಮ ಶ್ರಮ ಇರಬೇಕು.ನಾನು ಬೆಳೆಯಬೇಕೆಂಬ ಕನಸಿರಬೇಕು ಜೊತೆಗೆ ಇತರರನ್ನು ಬೆಳೆಸಬೇಕು ಎಂಬ ಮನಸ್ಸೂ ಇರಬೇಕು. ನಾಯಕನಾದವನು ಸೋಲಿನ ಹೊಣೆಯನ್ನು ತಾನೇ ಹೊತ್ತು, ಗೆಲುವಿನ ಸಂಭ್ರಮವನ್ನು ಎಲ್ಲರಿಗೂ ಹಂಚುವವನಾಗಿರಬೇಕು. ವ್ಯಕ್ತಿಗೆ ವಯಸ್ಸಾದಂತೆ ದುರ್ಬಲನಾಗುತ್ತಾನೆ. ಆದರೆ ಒಂದು ಸಂಸ್ಥೆ ಬೆಳೆ ಬೆಳೆಯುತ್ತಾ ಬಲಿಷ್ಟವಾಗುತ್ತದೆ.ಒಂದು ವಿದ್ಯಾಸಂಸ್ಥೆಯ ಬೆಳವಣಿಗೆಯಲ್ಲಿ ಸಮಾಜ ಮತ್ತು ಪೋಷಕರ ಪಾಲು ಬಹು ದೊಡ್ಡದು.ಆದ್ದರಿಂದ ರಾಷ್ಟ್ರೀಯ ವಸತಿ ಶಾಲೆಯ 25 ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲಾ ಪೋಷಕರು ಮತ್ತು ಕೋಣಂದೂರಿನ ಜನತೆಗೆ ರಾಷ್ಟ್ರೀಯ ಸಮಿತಿ ಕೃತಜ್ಞತೆ ಸಮರ್ಪಿಸುತ್ತಿದೆ ’ಎಂದರು .
ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆ ಮತ್ತು ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಲೆಯ ಪ್ರಾಂಶುಪಾಲ ಕೆ.ಎಸ್.ವಾಸುದೇವ , ರಾಷ್ಟ್ರೀಯ ಶಿಕ್ಷಣ ಸಮಿತಿ ಅಜೀವ ಸದಸ್ಯರಾದ ಸದಾನಂದ,ಎಚ್.ಎಸ್.ಗಣೇಶ್ ಮೂರ್ತಿ ಶಿಕ್ಷಣ ಪ್ರತಿಷ್ಟಾನದಎಚ್.ಎಸ್.ಅನಂತಮೂರ್ತಿ, ವತ್ಸಲಾ ಗಣೇಶ್ ಮೂರ್ತಿ, ರಾಷ್ಟ್ರೀಯ ವಸತಿ ಶಾಲೆಯ ಬಿ.ಕೆ.ಪ್ರಪುಲ್ಲಾ, ಎಚ್.ವಿ.ಮುರಳೀಧರ, ಸುಜಾತ ಮಹಲೆ , ವಿದ್ಯಾರ್ಥಿ ನಾಯಕರಾದ ಎ.ಧನುಷ್,ದೀಪ್ತಿ ಎಸ್.ಕಮಡೊಳ್ಳಿ ಇದ್ದರು.
















Leave a Reply