ತಬ್ಬಲಿ ಮಕ್ಕಳಂತೆ ನಮ್ಮನ್ನು ನಡೆಸಿಕೊಂಡದ್ದು ಸಾಕು – ಹೊಸನಗರ ಮತ್ತೆ ವಿಧಾನಸಭಾ ಕ್ಷೇತ್ರವಾಗಲೇಬೇಕು

Blue and Red Voter Education Banner 20260405 075610 0000 2 scaled ತಬ್ಬಲಿ ಮಕ್ಕಳಂತೆ ನಮ್ಮನ್ನು ನಡೆಸಿಕೊಂಡದ್ದು ಸಾಕು - ಹೊಸನಗರ ಮತ್ತೆ ವಿಧಾನಸಭಾ ಕ್ಷೇತ್ರವಾಗಲೇಬೇಕು
Spread the love

ಬರಹ : ಸಾಮ್ರಾಜ್ಯ ಶೆಟ್ಟಿ, ಶ್ರೀಧರಪುರ, ನಗರ

ಆಸ್ತಿ ಮನೆ ಇದ್ದರು ತಂದೆ ತಾಯಿ ಕಳೆದುಕೊಂಡು ತಬ್ಬಲಿಗಳಂತೆ ಆಗಿದೆ ಹೊಸನಗರ ತಾಲೂಕಿನ ಜನಸಾಮಾನ್ಯರ ಪರಿಸ್ಥಿತಿ. ಹೌದು,  ಹೊಸನಗರ ತಾಲೂಕಿನ ನಗರ ಹೋಬಳಿಯ ಕುರಿತು ಹೇಳುವುದಾದರೆ

★ಕೆಳದಿ ಅರಸರ ರಾಜಧಾನಿ ಆಗಿತ್ತು ನಮ್ಮ ಬಿದನೂರು.
★ವಿಜಯನಗರ ಸಾಮ್ರಾಜ್ಯಕ್ಕೆ ಚಿನ್ನದ ಕುಸುರಿ ಕೆಲಸಗಳಿಗಾಗಿ ನಮ್ಮ ಬಿದನೂರು ಅಕ್ಕಸಾಲಿಗರೇ ಹೆಸರುವಾಸಿಗಳಾಗಿದ್ದರು.
★ಅತ್ಯಂತ ಬಲಿಷ್ಠ ಸೈನ್ಯ ಹೊಂದಿದ್ದ ಔರಂಗಜೇಬ್ ನ ಸೈನ್ಯವನ್ನೆ ಸೋಲಿಸಿದ ಇತಿಹಾಸ ನಮ್ಮ ಬಿದನೂರು ರಾಜಮನೆತನದ್ದು
★ಛತ್ರಪತಿ ಶಿವಾಜಿ ಮಹಾರಾಜರ ಮಗ ರಾಜರಾಮರಿಗೆ ಆಶ್ರಯ ನೀಡಿದ ನಮ್ಮೂರು ಬಿದನೂರು.
★ರಾಜಮನೆತನಗಳ ಆಳ್ವಿಕೆ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾಲ್ಲೂಕು ಕೇಂದ್ರವಾಗಿದ್ದ ಬಿದನೂರು ನಗರ.
★ಸರ್ ಎಂ ವಿಶೇಶ್ವರಯ್ಯನವರಿಗೆ K.R.S ಕಾರಂಜಿಗೆ ಪ್ರೇರಣೆ ಆದಂತಹ ದೇವಗಂಗೆ ಸಪ್ತ ಕೊಳಗಳು, ಐತಿಹಾಸಿಕ ಬಿದನೂರು ಕೋಟೆ, ಏಷ್ಯದ ಅತ್ಯಂತ ಎತ್ತರದ ಜಲಪಾತ ಕುಂಚಿಕಲ್ ಫಾಲ್ಸ್, ಕೊಡಚಾದ್ರಿ ಗಿರಿ ಶಿಖರ, ಗಳಿಗೆ ಬಟ್ಟಲು, ಬಾಳೆಬರೆ ಫಾಲ್ಸ್, ಅಬ್ಬಿ ಫಾಲ್ಸ್, ಚಕ್ರ ಫಾಲ್ಸ್, ಹಿಡ್ಲುಮನೆ ಫಾಲ್ಸ್, ಹಾಗೂ ಒಂದಲ್ಲ ಎರಡಲ್ಲ 5 ಜಲಾಶಯಗಳ್ಳನ್ನು ತನ್ನೊಡಲಿನಲ್ಲಿ ತುಂಬಿಕೊಂಡಿರುವ ನಗರ ಹೋಬಳಿ.

ಇಷ್ಟು ಸಾಲದ್ದಕ್ಕೆ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸುವ ಸಲುವಾಗಿ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯ ನಗರವನ್ನು ನೀರಿನಲ್ಲಿ ನಗರದ ಅಭಿವೃದ್ಧಿ ಕನಸುಗಳ ಜೊತೆಗೆ ಮುಳುಗಿಸಿತು. ಹಾಗೂ ಒಟ್ಟಾರೆ ಹೊಸನಗರ ತಾಲ್ಲೂಕ್ಕೂ ರಾಜ್ಯಕ್ಕೆ ಬೆಳಕು ನೀಡಿ ಕತ್ತಲಲ್ಲಿ ಕಳೆದೇ ಹೋಯಿತು.ಮುಳುಗಡೆ ಆದ ಬಹುಪಾಲು ಕುಟುಂಬಗಳು ವಲಸೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿತು. ಅಂತೆಯೇ ತನ್ನ ವಿಧಾನ ಸಭಾ ಕ್ಷೇತ್ರ ಕೂಡ ಹೊಸನಗರ ಕಳೆದುಕೊಂಡು ಅರ್ಧ ಭಾಗ ಸಾಗರ ಕ್ಷೇತ್ರಕ್ಕೆ ಇನ್ನರ್ಧ  ಭಾಗ ತೀರ್ಥಹಳ್ಳಿ ಕ್ಷೇತ್ರಕ್ಕೆ ಹಂಚಿ ಹೋಯಿತು.

ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿ ಮತ್ತು ತಿರುವುಗಳನ್ನು ಕಡಿತಗೊಳಿಸಿ ಹತ್ತಿರದ ಮಾರ್ಗಗಳಿಗಾಗಿ ಸಾಲು ಸಾಲು ಸೇತುವೆಗಳ ನಿರ್ಮಾಣಕಾರ್ಯ ಹಾಗೂ ಆಗುಂಬೆ-ಸೋಮೇಶ್ವರ ಟನಲ್ ಮಾರ್ಗಗಳ ಸುದ್ದಿಗಳು ನಮ್ಮ ನಗರ ಮತ್ತು ಹೊಸನಗರ ತಾಲ್ಲೂಕನ್ನು ದ್ವೀಪಗಳನ್ನಾಗಿ ಮಾರ್ಪಾಡು  ಮಾಡುತ್ತಿವೆ.

ಕೃಷಿ ಕ್ಷೇತ್ರವೇ ನಮ್ಮ ತಾಲ್ಲೂಕ್ಕಿನ ಉಸಿರು. ಆದರೆ ಪ್ರಸ್ತುತ ವರ್ಷಗಳಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆ ಮತ್ತು ಕಣ್ಣಿಗೆ ಕಾಣದ ಕೆಲವು ಸೂಕ್ಷ್ಮಾಣು ಜೀವಿಗಳಿಂದ ನಮ್ಮ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಎಂಬ ಮಾಹಾಮಾರಿ ಕಾಯಿಲೆ ಬಂದು ಆವರಿಸಿದೆ, ನಮಗೆ ವರ್ಷ ಬರುವಂತೆ ಈ ವರ್ಷ ಬರಬೇಕಾದ ಬೆಳೆವಿಮೆ ಕೂಡ ಸರಿಯಾಗಿ ಬಂದಿಲ್ಲ, ಕೃಷಿಕರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲಿಲ್ಲ, ಇನ್ನೊಂದು ಕಡೆ ನೂರಾರು ವರ್ಷಗಳಿಂದ ನಮ್ಮ ಪೂರ್ವಜರ ಆದಿಯಾಗಿ ಬಂದಿರುವ ನಮ್ಮದೇ ಜಮೀನನ್ನು ತೆರವು ಗೊಳಿಸಿ ಎಂಬ ಅರಣ್ಯ ಇಲಾಖೆಯ ಮಾನಸಿಕ ಒತ್ತಡ ಮತ್ತು ಹಿಂಸೆ. ಇದನ್ನೆಲ್ಲಾ ಕೇಳಲು ನಮ್ಮ ತಾಲ್ಲೂಕಿಗೆ ನಮ್ಮ ಶಾಸಕರೇ ಇದ್ದರೆ  ಹೀಗಾಗುತ್ತಿತ್ತೆ?

ಒಂದು ಕಾಲದಲ್ಲಿ ಗತ ವೈಭವದಿಂದ ಮೆರೆದ ಬಿದನೂರು ನಗರ ಇಂದು ಅಭಿವೃದ್ಧಿ ಕುಂಟಿತದಿಂದ ಅವನತಿಯ ಸ್ಥಿತಿಗೆ ಹೋಗುತ್ತಿದೆ ಎಂದರೆ ತಂದೆ ತಾಯಿ ಕಳೆದುಕೊಂಡ ತಬ್ಬಲಿ ಮಕ್ಕಳಂತಾಯಿತು ತಾನೇ ನಮ್ಮೂರು. ನಮಗೂ ಪ್ರತ್ಯೇಕ ಶಾಸಕರಿದ್ದರೆ ಹೀಗಾಗುತ್ತಿತ್ತೆ? ಸಾಗರ ತಾಲ್ಲೂಕು ಅಥವಾ ತೀರ್ಥಹಳ್ಳಿ ತಾಲೂಕಿನ ಇಂತಹ ಒಂದು ಉದಾಹರಣೆಯಾದರು ಆಗಿದೆಯೇ?

10006928164231945423466088752 ತಬ್ಬಲಿ ಮಕ್ಕಳಂತೆ ನಮ್ಮನ್ನು ನಡೆಸಿಕೊಂಡದ್ದು ಸಾಕು - ಹೊಸನಗರ ಮತ್ತೆ ವಿಧಾನಸಭಾ ಕ್ಷೇತ್ರವಾಗಲೇಬೇಕು

ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಬೇಕೇ ಬೇಕು :

ಈ ನಮ್ಮ ಅಳಲನ್ನು ನಾವು ಸಾಗರ ಶಾಸಕರಿಗೆ ಹೇಳಬೇಕೇ? ಅಥವಾ ತೀರ್ಥಹಳ್ಳಿ ಶಾಸಕರಿಗೆ ಹೇಳಬೇಕೇ? ಎನ್ನುವ ಗೊಂದಲ ಒಂದುಕಡೆ ಆದರೆ ಅದಕ್ಕೆ ತಕ್ಕ ಸ್ಪಂದನೆ ಸಿಗುತ್ತದೆಯೇ ಎನ್ನುವುದು ಇನ್ನೊಂದು ಕಡೆ.

ನಮ್ಮ ಸಾಮಾಜಿಕ ಸಮಸ್ಯೆಗಳನ್ನು ಕೇಳಲು, ನಮ್ಮ ಅಳಲುಗಳಿಗೆ ಸ್ಪಂದಿಸಲು, ನಮ್ಮೆಲ್ಲ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಇನ್ನಷ್ಟು ಜನಮಾನ್ಯಗೊಳಿಸಲು ನಮಗೆ ಪ್ರತ್ಯೇಕ ಶಾಸಕರು ಬೇಕೇ ಬೇಕು. ಹೊಸನಗರ ಮತ್ತೆ ವಿಧಾನಸಭಾ ಕ್ಷೇತ್ರವಾಗಿ ಮರುವಿಂಗಡಣೆ ಆಗಲೇಬೇಕು.

ಈ ಮೂಲ ಕಾರಣಕ್ಕಾಗಿ ಏಪ್ರಿಲ್ 05 ರಂದು ಪರಮಪೂಜ್ಯ ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ನಗರದಿಂದ ಕಾಲ್ನಡಿಗೆಯ ಮೂಲಕ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಬೃಹತ್ ಪಾದಯಾತ್ರೆ ಮೂಲಕ ಹೊರಟು 06 ನೆ ತಾರೀಖು ರಿಪ್ಪನ್ ಪೇಟೆ ತಲುಪಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ. ಹೊಸನಗರ ತಾಲೂಕ್ಕಿನ ಸರ್ವರೂ ಈ ಹೋರಾಟದಲ್ಲಿ ಭಾಗಿಯಾಗಬೇಕು.

img 20260322 wa00174249863112941860415 ತಬ್ಬಲಿ ಮಕ್ಕಳಂತೆ ನಮ್ಮನ್ನು ನಡೆಸಿಕೊಂಡದ್ದು ಸಾಕು - ಹೊಸನಗರ ಮತ್ತೆ ವಿಧಾನಸಭಾ ಕ್ಷೇತ್ರವಾಗಲೇಬೇಕು

Leave a Reply

Your email address will not be published. Required fields are marked *