ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಕಲಾತ್ಮಕತೆ ಮತ್ತು ವೈಜ್ಞಾನಿಕ ಅರಿವು
ರಿಪ್ಪನ್ ಪೇಟೆ : ವಿಜ್ಞಾನ ದಿನಾಚರಣೆ ಅಂಗವಾಗಿ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಮಡಿಕೊಪ್ಪ ಶಾಲೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೋಗಗಳು ಹಾಗೂ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು.
ಕಳೆದ ಒಂದು ವಾರದಿಂದಲೇ ವಿದ್ಯಾರ್ಥಿಗಳು ಉತ್ಸಾಹದಿಂದ ತಯಾರಿಯಲ್ಲಿ ತೊಡಗಿಕೊಂಡು, ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಮರುಬಳಕೆ ಸಾಮಾಗ್ರಿಗಳನ್ನು ಬಳಸಿಕೊಂಡು ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಿದ್ದರು. ವಿದ್ಯಾರ್ಥಿಗಳು ಸೂಕ್ಷ್ಮದರ್ಶಕ, ಕಣ್ಣಿನ ಮಾದರಿ, ಕಿವಿಯ ಮಾದರಿ ಸೇರಿದಂತೆ ವಿವಿಧ ಮಾದರಿಗಳನ್ನು ತಯಾರಿಸಿ ಅವುಗಳ ಕಾರ್ಯವಿಧಾನವನ್ನು ವಿವರಿಸಿದರು. ನೀರಿನ ಶುದ್ಧೀಕರಣ ವಿಧಾನ, ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆಯ ಕ್ರಿಯೆ, ಶ್ವಾಸಾಂಗ ವ್ಯೂಹ , ದ್ರವ್ಯದ ಮೇಲೆ ಉಷ್ಣದ ಪರಿಣಾಮ, ಆಹಾರ ಸರಪಳಿ, ಸೌರವ್ಯೂಹ ಮಾದರಿ ಹಾಗೂ ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳೇ ಸ್ವತಃ ಪ್ರಯೋಗಗಳನ್ನು ನಡೆಸಿ ತಿಳುವಳಿಕೆ ನೀಡಿದರು.
ವಿಜ್ಞಾನ ದಿನಾಚರಣೆಯ ಅಂಗವಾಗಿ ಏಳನೇ ತರಗತಿ ವಿದ್ಯಾರ್ಥಿಗಳು ರಂಗೋಲಿ ಮೂಲಕ ವಿಜ್ಞಾನ ಸಂಬಂಧಿತ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಹೃದಯದ ರಚನೆ, ಜೀರ್ಣಾಂಗ ವ್ಯೂಹ, ರಕ್ತ ಪರಿಚಲನಾ ವ್ಯವಸ್ಥೆ ಹಾಗೂ ಮೂತ್ರಜನಕಾಂಗದ ಚಿತ್ರಗಳನ್ನು ಅತ್ಯಂತ ಆಕರ್ಷಕವಾಗಿ ಮತ್ತು ಅಚ್ಚುಕಟ್ಟಾಗಿ ರಂಗೋಲಿಯಲ್ಲಿ ಚಿತ್ರಿಸಿದರು.

ಬಣ್ಣಬಣ್ಣದ ರಂಗೋಲಿಯ ಮೂಲಕ ಮಾನವ ದೇಹದ ಪ್ರಮುಖ ಅಂಗಾಂಗಗಳ ವಿನ್ಯಾಸವನ್ನು ಸ್ಪಷ್ಟವಾಗಿ ತೋರಿಸಿ, ಅವುಗಳ ಕಾರ್ಯವಿಧಾನವನ್ನು ಸಹ ವಿದ್ಯಾರ್ಥಿಗಳೇ ವಿವರಿಸಿದರು. ಕಲಾತ್ಮಕತೆ ಮತ್ತು ವೈಜ್ಞಾನಿಕ ಅರಿವು ಒಂದಾಗಿ ಮೂಡಿಬಂದ ಈ ಪ್ರದರ್ಶನವನ್ನು ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.ರಂಗೋಲಿ ಮೂಲಕ ವಿಜ್ಞಾನವನ್ನು ಪರಿಚಯಿಸುವ ಈ ಪ್ರಯತ್ನವು ಮಕ್ಕಳ ಸೃಜನಶೀಲತೆಗೂ, ವಿಷಯದ ಆಳವಾದ ತಿಳುವಳಿಕೆಗೂ ಉತ್ತಮ ಉದಾಹರಣೆಯಾಗಿ ಕಂಡುಬಂತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಹೇರಂಬ ಸ್ವಾಮಿ, ವಿಜ್ಞಾನ ಶಿಕ್ಷಕಿ ಪೂರ್ಣಿಮಾ ಬೊಮ್ಮಣ್ಣನವರ್, ವೇರೋನಿಕಾ, ಲಕ್ಷ್ಮಪ್ಪ, ಕುಸುಮ ಕೀರ್ತಿಕುಮಾರ್, ಸುರೇಂದ್ರ, ಸೌಮ್ಯ ಹಾಲೋಜಿ, ಶೋಭಾ, ಗಂಗೂಬಾಯಿ, ಪ್ರತಿಮಾ, ತುಳಸಿ ಕುಮಾರ್, ರಾಜಕುಮಾರ, ಗಗನ್ ಹಾಗೂ ಅಡುಗೆ ಸಿಬ್ಬಂದಿಗಳಾದ ರೇಣುಕಾ ಮತ್ತು ಅನಿತಾ ಉಪಸ್ಥಿತರಿದ್ದರು. ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಾರೆಯಾಗಿ, ವಿಜ್ಞಾನ ದಿನಾಚರಣೆ ಕಾರ್ಯಕ್ರಮವು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಜೊತೆಗೆ ಅವರ ಸೃಜನಶೀಲತೆಗೆ ವೇದಿಕೆಯಾಗಿದ್ದು ವಿಶೇಷವಾಗಿತ್ತು.










Leave a Reply