ರಿಪ್ಪನ್ಪೇಟೆ: ಸಮೀಪದ ಹರತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಜವಳ್ಳಿ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಕಳೆನಾಶಕ ಸಿಂಪಡಿಸಿ ಗಿಡಗಳಿಗೆ ಹಾನಿ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ರೈತರೊಬ್ಬರು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರ ಯೋಗೇಂದ್ರಪ್ಪ ಅವರಿಗೆ ಸೇರಿದ ಸರ್ವೇ ನಂ. 57ರ ಸುಮಾರು ಒಂದು ಎಕರೆ ತೋಟದಲ್ಲಿ ಎರಡು ವರ್ಷ ವಯಸ್ಸಿನ ಅಡಿಕೆ ಗಿಡಗಳನ್ನು ಬೆಳೆಸಲಾಗಿತ್ತು. ತೋಟಕ್ಕೆ ಭೇಟಿ ನೀಡಿದ ವೇಳೆ 50ಕ್ಕೂ ಹೆಚ್ಚು ಗಿಡಗಳಿಗೆ ಕಳೆನಾಶಕ ಸಿಂಪಡಿಸಿರುವ ಲಕ್ಷಣಗಳು ಕಂಡುಬಂದಿದ್ದು, ಹಲವು ಗಿಡಗಳು ಒಣಗಲು ಆರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಕೃತ್ಯದಿಂದ ತಮಗೆ ಆರ್ಥಿಕ ನಷ್ಟ ಉಂಟಾಗಿದ್ದು, ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕಳೆನಾಶಕ ಸಿಂಪಡಿಸಿದ್ದಾರೆ ಎಂದು ಆರೋಪಿಸಿ ಯೋಗೇಂದ್ರಪ್ಪ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಯಾರು ಮತ್ತು ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ರಿಪ್ಪನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
















Leave a Reply