
ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಗಾಳಿ-ಮಳೆಗೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಹಾರಿದ ಘಟನೆ ನಡೆದಿದೆ.
ಭಾರೀ ಗಾಳಿಯ ತೀವ್ರತೆಗೆ ಸಭಾಂಗಣದ ಮೇಲ್ಭಾಗಕ್ಕೆ ಅಳವಡಿಸಲಾಗಿದ್ದ ಟಿನ್ ಶೀಟ್‌ಗಳು ಹಾಗೂ ಕಬ್ಬಿಣದ ಆಂಗಲರ್‌ಗಳು ಎಗರಿ ಕೆರೆಹಳ್ಳಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ರಸ್ತೆಯ ಮಧ್ಯಭಾಗದಲ್ಲಿ ಅವಶೇಷಗಳು ಬಿದ್ದಿವೆ.

ಘಟನೆ ಸಂಭವಿಸಿದ ವೇಳೆ ರಸ್ತೆ ಮೇಲೆ ಸಾರ್ವಜನಿಕರು ಅಥವಾ ವಾಹನಗಳ ಸಂಚಾರ ಕಡಿಮೆಯಾಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಲ್ಲದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಕಟ್ಟಡದ ಕೆಲವು ಶೀಟುಗಳು ಹಾರಿಹೋಗಿರುವ ಘಟನೆಯೂ ಕೂಡ ವರದಿಯಾಗಿದೆ. ಅಪಾರ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದ್ದು ಘಟನಾ ಸ್ಥಳಕ್ಕೆ ಗ್ರಾಮ್ ಪಂಚಾಯ್ತಿ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಭಾರಿ ಗಾಳಿ ಮತ್ತು ಮಳೆಯ ಪರಿಣಾಮ ಪಟ್ಟಣದ ಹಲವು ಭಾಗಗಳಲ್ಲಿ ಮರಗಳು ಉರುಳಿರುವುದು, ವಿದ್ಯುತ್ ವ್ಯತ್ಯಯ ಉಂಟಾಗಿರುವುದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಾದ ನಾಗೇಶ್ ಮೋರೆ, ರಾಜೇಶ್, ಮನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹವಾಮಾನ ವೈಪರಿತ್ಯದ ಹಿನ್ನೆಲೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

















Leave a Reply