ಇನ್ನೆಷ್ಟು ವರ್ಷ ಆರೋಗ್ಯ ಸೌಕರ್ಯವಿಲ್ಲದೆ ಜನ ಸಾಯಬೇಕು?
ಎನ್.ಕಾರ್ತಿಕ್ ಕೌಂಡಿನ್ಯ
ರಿಪ್ಪನ್ ಪೇಟೆ : ಈ ಬಾರಿಯ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ರಿಪ್ಪನ್ ಪೇಟೆಗೆ ಸಮುದಾಯ ಆಸ್ಪತ್ರೆ ಘೋಷಣೆ ಸಾಧ್ಯತೆಗಳ ಬಗ್ಗೆ ಆಶಾಭಾವನೆ ಮೂಡಿದೆ.
ಕಳೆದ 7-8 ವರ್ಷಗಳಿಂದ ಸಮುದಾಯ ಆಸ್ಪತ್ರೆ ನಿರ್ಮಾಣಕ್ಕಾಗಿ ನಿರಂತರ ಹೋರಾಟಗಳು, ಮನವಿ ಸಲ್ಲಿಕೆಗಳು ಹಾಗೂ ಪಾದಯಾತ್ರೆಗಳು ನಡೆದಿದ್ದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರಿಪ್ಪನ್ ಪೇಟೆ ಪಟ್ಟಣವು ಸುಮಾರು 10 ಗ್ರಾಮ ಪಂಚಾಯತಿಗಳ ಕೇಂದ್ರವಾಗಿದ್ದು, ವ್ಯಾಪಾರ, ಶಿಕ್ಷಣ ಹಾಗೂ ಆಡಳಿತ ಚಟುವಟಿಕೆಗಳ ಪ್ರಮುಖ ಹಬ್ ಆಗಿದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ, ಇಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆಯೇ ಅವಲಂಬಿತವಾಗಿದೆ. ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಿದ್ದರೂ, ತಜ್ಞ ವೈದ್ಯರ ಕೊರತೆ, ತುರ್ತು ಚಿಕಿತ್ಸಾ ಘಟಕದ ಸೌಲಭ್ಯ , ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ಸೌಲಭ್ಯಗಳ ಕೊರತೆ ಗಂಭೀರ ಸಮಸ್ಯೆಯಾಗಿದೆ.
ಪರಿಣಾಮವಾಗಿ ಗಂಭೀರ ಸ್ಥಿತಿಯ ರೋಗಿಗಳನ್ನು ದೂರದ ಖಾಸಗಿ ಅಥವಾ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.ಸಮುದಾಯ ಆಸ್ಪತ್ರೆ ನಿರ್ಮಾಣಕ್ಕಾಗಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿರುವ ಗವಟೂರು ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಕಾಗೋಡು ತಿಮ್ಮಪ್ಪ ಅವರು ಮಂಜೂರು ಮಾಡಿಸಿದ್ದರು. ತದನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಯಾವುದೇ ಅನುದಾನಗಳು ಬಿಡುಗಡೆ ಆಗಿರಲಿಲ್ಲ. ಈಗ ಗ್ಯಾರೆಂಟಿ ಯೋಜನೆಗಳಿಂದ ಅನುದಾನದ ಕೊರತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಅಭಾವದಿಂದ ಕಾಮಗಾರಿ ಆರಂಭವಾಗದೇ ನೆನೆಗುದಿಗೆ ಬಿದ್ದಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯರು ಕಾರ್ಯನಿರ್ವಹಿಸುತ್ತಿರುವುದರಿಂದ ಅಧಿಕ ಒತ್ತಡವು ಅವರ ಮೇಲಿದೆ ಅದರಲ್ಲೂ ಅಪಘಾತದಂತಹ ತುರ್ತು ಪರಿಸ್ಥಿತಿಗಳಲ್ಲಿ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಜನರ ನೋವು.
ಅಂದು ಹೋರಾಟ – ಇಂದು ಸರ್ಕಾರ ಬಂದು ಮೂರು ವರ್ಷ ಕಳೆದರೂ ಆಸ್ಪತ್ರೆ ಭಾಗ್ಯ ಇಲ್ಲ??

ಬಿಜೆಪಿ ಸರ್ಕಾರ ಇರುವಾಗ 2022ರಲ್ಲಿ ಇಂದಿನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಮುದಾಯ ಆಸ್ಪತ್ರೆ ಬೇಡಿಕೆಗೆ ಸಂಬಂಧಿಸಿದಂತೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಅವರು ಈ ವಿಚಾರವನ್ನು ಪ್ರಮುಖವಾಗಿ ಹೋರಾಟದ ಮೂಲಕ ಗಮನಸೆಳೆದಿದ್ದರು. ಆದರೆ ಇದೀಗ ಅವರದ್ದೇ ಸರ್ಕಾರ ಅಧಿಕಾರದಲ್ಲಿದ್ದು ಮೂರು ವರ್ಷ ಕಳೆದರೂ 5 ಎಕರೆ ಭೂಮಿಗೆ ಶಾಸಕ ಗೋಪಾಲಕೃಷ್ಣ ಅವರ ಅನುದಾನದಲ್ಲಿ ಬೇಲಿ ನಿರ್ಮಾಣಗೊಂಡಿದೆ ಬಿಟ್ಟರೆ ಸ್ಪಷ್ಟ ಅನುಮೋದನೆ, ಅನುದಾನ ಸಿಗದಿರುವುದು ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ.

“ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಮ್ಮ ಪ್ರಯತ್ನ ನಿರಂತರವಾಗಿದೆ. ಸಚಿವರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗುವ ನಿರೀಕ್ಷೆ ಇದೆ. ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.”
– ಗೋಪಾಲಕೃಷ್ಣ ಬೇಳೂರು, ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ
ಜನರ ಆರೋಗ್ಯ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿರೋಧ ಪಕ್ಷ ಅನೇಕ ವೇದಿಕೆಗಳಲ್ಲಿ ಒತ್ತಾಯಿಸುತ್ತಿದ್ದು, ಆಡಳಿತ ಪಕ್ಷವೂ ಯೋಜನೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳುತ್ತಿದ್ದಾರೆ . ಆದರೂ ಜನಸಾಮಾನ್ಯರಲ್ಲಿ ಸಮುದಾಯ ಆಸ್ಪತ್ರೆಯ ಬೇಡಿಕೆ ಮತ್ತು ಇಲ್ಲಿನ ಸಮಸ್ಯೆಗಳು ಪರಿಹಾರವಾಗಬೇಕೆಂಬ ನಿರೀಕ್ಷೆ ಮಾತ್ರ ಹೆಚ್ಚುತ್ತಲೇ ಇದೆ.

“ಅಪಘಾತ, ಹೆರಿಗೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಯಿಂದ ಜೀವ ಹಾನಿ ಹೆಚ್ಚಾಗಿದೆ, ಜನರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ರಿಪ್ಪನ್ ಪೇಟೆಗೆ ಸಮುದಾಯ ಆಸ್ಪತ್ರೆ ಘೋಷಣೆ ಮಾಡಲೇಬೇಕು.”
–ಎನ್. ಸತೀಶ್, ಬಿಜೆಪಿ ಮುಖಂಡ
ಈ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಮುದಾಯ ಆಸ್ಪತ್ರೆಗೆ ಅಗತ್ಯ ಅನುದಾನ ಘೋಷಿಸಿ, ಕಾಮಗಾರಿ ಶೀಘ್ರ ಆರಂಭಿಸುವ ಮೂಲಕ ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ 10 ಪಂಚಾಯತಿಗಳ ಜನತೆಗೆ ಸಮರ್ಪಕ ಆರೋಗ್ಯ ಸೌಲಭ್ಯ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಒಟ್ಟಾರೆ ರಿಪ್ಪನ್ ಪೇಟೆಯ ಜನತೆ “ಈ ಬಾರಿಯಾದರೂ ನಮ್ಮ ಕನಸು ನನಸಾಗಲಿ” ಎಂಬ ನಿರೀಕ್ಷೆಯೊಂದಿಗೆ ಜನತೆ ಬಜೆಟ್ ಕಡೆ ಕಾತುರದಿಂದ ಕಾಯುತ್ತಿದ್ದಾರೆ.
#karnatakaBudget #RIPPANPETE #Shivamogga #Community Hospital Demond














Leave a Reply