ನೆರಳೂ ಪಾಠ ಕಲಿಸುತ್ತದೆ; ಕಲಿಯಲು ನಾವು ಸಿದ್ದವಿರಬೇಕಷ್ಟೆ… -ಡಾ.ರವೀಶ್ ಎನ್.ಎಸ್

Add a heading 20260726 123901 0000 ನೆರಳೂ ಪಾಠ ಕಲಿಸುತ್ತದೆ; ಕಲಿಯಲು ನಾವು ಸಿದ್ದವಿರಬೇಕಷ್ಟೆ... -ಡಾ.ರವೀಶ್ ಎನ್.ಎಸ್
Spread the love

  ನಿನ್ನೆ ಸಂಜೆ ನಾನು ನನ್ನ ಮಗ ಆರ್ಯನೊಂದಿಗೆ ನಡೆಯುತ್ತಿದ್ದಾಗ, ಕತ್ತಲು ಆವರಿಸುತ್ತಿದ್ದ ರಸ್ತೆಯ ದೀಪದ ಬೆಳಕಿನಲ್ಲಿ ನಮ್ಮಿಬ್ಬರ ನೆರಳುಗಳು ನಮ್ಮ ಮುಂದೆಯೇ ಉದ್ದಕ್ಕೆ ಚಾಚಿಕೊಂಡಿದ್ದವು. ಆಟದ ಲಹರಿಯಲ್ಲಿದ್ದ ಮಗ ಹಠಾತ್ತನೆ, “ಅಪ್ಪಾ, ನನ್ನ ನೆರಳನ್ನು ನಾನು ಎಷ್ಟು ಜೋರಾಗಿ ತುಳಿದರೂ ಅದಕ್ಕೆ ಯಾಕೆ ನೋವಾಗುವುದಿಲ್ಲ?” ಎಂದು ಮುಗ್ಧತೆಯಿಂದ ಕೇಳಿದ. ಆ ಪ್ರಶ್ನೆ ನನ್ನನ್ನು ಕ್ಷಣಕಾಲ ಮೌನಕ್ಕೆ ತಳ್ಳಿತು. ಅವನು ತನ್ನದೇ ನೆರಳನ್ನು ತುಳಿಯಲು ಹವಣಿಸುತ್ತಿದ್ದ, ಆದರೆ ಎಷ್ಟು ತುಳಿದರೂ ಆ ನೆರಳು ಅವನ ಕಾಲಡಿಯಲ್ಲಿ ಸದ್ದಿಲ್ಲದೆ ಮಲಗುತ್ತಿತ್ತೇ ವಿನಃ ಯಾವುದೇ ಅಪಸ್ವರ ಎತ್ತುತ್ತಿರಲಿಲ್ಲ.

ದಿನನಿತ್ಯದ ಬದುಕಿನ ಗದ್ದಲದಲ್ಲಿ ನಾವು ಎಂದಾದರೂ ನಮ್ಮದೇ ನೆರಳನ್ನು ಇಷ್ಟು ಸೂಕ್ಷ್ಮವಾಗಿ ಗಮನಿಸಿದ್ದೇವೆಯೇ? ಮಗನ ಆ ಮುಗ್ಧ ಪ್ರಶ್ನೆಯ ಹಿಂದೆ ಬದುಕಿನ ಆಳವಾದ ಸತ್ಯವೊಂದು ಅಡಗಿರುವಂತೆ ಭಾಸವಾಯಿತು. ನಮ್ಮ ನೆರಳನ್ನು ನಾವು ತುಳಿಯದೆ ಅದನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಿಲ್ಲ. ನಾವಷ್ಟೇ ಅಲ್ಲ, ದಾರಿಯಲ್ಲಿ ಹೋಗುವ ಯಾರಾದರೂ ನಮ್ಮ ನೆರಳನ್ನು ತುಳಿದು ಹೋಗಬಹುದು. ಆದರೆ ಈ ಸಾಮಾನ್ಯ ಭೌತಿಕ ಕ್ರಿಯೆಯ ಹಿಂದೆ ಬದುಕಿನ ಅಪರೂಪದ ತತ್ವಶಾಸ್ತ್ರ ಅಡಗಿದೆ.

ನೆರಳಾಗುವ ವ್ಯಕ್ತಿಗೆ, ನೆರಳಾಗುವ ಗುಣಕ್ಕೆ, ನೆರಳಿನಂತೆ ನಿಸ್ವಾರ್ಥವಾಗಿ ಜೊತೆಯಾಗುವ ಆತ್ಮೀಯತೆಗೆ ತುಳಿಯುವವರ ಬಗ್ಗೆ ಎಂದಿಗೂ ದ್ವೇಷವಿರುವುದಿಲ್ಲ. ಯಾರು ಎಷ್ಟೇ ಕಡೆಗಣಿಸಿದರೂ, ಎಷ್ಟೇ ತುಳಿದರೂ, ಅದು ಪ್ರತಿಯಾಗಿ ಕೋಪವನ್ನಲ್ಲ; ಮೌನದ ತಂಪನ್ನೇ ನೀಡುತ್ತದೆ. ಇದೇ ನೆರಳಿನ ಪರಮಗುಣ. ಇದೇ ನಿಶ್ಶಬ್ದ ಸಹಿಷ್ಣುತೆ ಜೀವನದ ಅತ್ಯಂತ ಗಂಭೀರ ಪಾಠಗಳಲ್ಲಿ ಒಂದಾಗಿದೆ.

ನಮ್ಮ ಕಣ್ಣಿಗೆ ಕಾಣುವ ಈ ನಿಶ್ಯಬ್ದ ನೆರಳಿನ ಹಿಂದೆ ಪ್ರಕೃತಿಯ ಅಚಲ ನಿಯಮವಿದೆ. ಭೌತಶಾಸ್ತ್ರದಲ್ಲಿ ನೆರಳಿನ ಗಾಢ ಭಾಗವನ್ನು ಉಂಬ್ರಾ (Umbra) ಮತ್ತು ಅರೆನೆರಳಿನ ಭಾಗವನ್ನು ಪೆನಂಬ್ರಾ (Penumbra) ಎಂದು ಕರೆಯುತ್ತಾರೆ. ಸಂಪೂರ್ಣ ಕತ್ತಲೆ ಮತ್ತು ಸಂಪೂರ್ಣ ಬೆಳಕಿನ ನಡುವೆ ಅಸ್ತಿತ್ವದಲ್ಲಿರುವ ಆ ಮೃದುವಾದ ಅರೆನೆರಳು ಪ್ರಕೃತಿಯ ಸಮತೋಲನದ ಸಂಕೇತವಾಗಿದೆ. ವೈಜ್ಞಾನಿಕವಾಗಿ ಅದು ಬೆಳಕಿನ ಭಾಗಶಃ ಅಡಚಣೆಯಿಂದ ಉಂಟಾಗುವ ಪ್ರದೇಶ ಮಾತ್ರ. ತತ್ವಶಾಸ್ತ್ರದ ದೃಷ್ಟಿಯಲ್ಲಿ ಅದು ಬದುಕಿನ ಅತ್ಯಂತ ಸುಂದರ ರೂಪಕ.
ಮನಶ್ಶಾಸ್ತ್ರಜ್ಞ ಕಾರ್ಲ್ ಯುಂಗ್ ಮಾನವನ ಸುಪ್ತ ಮನಸ್ಸಿನ ಅದೃಶ್ಯ ಆಸೆ-ಆಕಾಂಕ್ಷೆಗಳನ್ನು ‘ಶಾಡೋ’ ಎಂದು ಕರೆದರು. ನಮಗೆ ಬೆಳಕು ಬಿದ್ದಾಗ ಮಾತ್ರ ಜಗತ್ತಿಗೆ ನಮ್ಮ ನೆರಳು ಕಾಣಿಸುತ್ತದೆ.

ನಾವು ಯಶಸ್ಸಿನ ಬೆಳಕಿನಲ್ಲಿ ನಿಂತಾಗ, ನಮ್ಮ ಹಿಂದೆ ನಿಂತ ಅನೇಕ ತ್ಯಾಗಗಳ ನೆರಳು ಕಾಣಿಸದೇ ಉಳಿಯುತ್ತದೆ. ತಾಯಿ-ತಂದೆ, ಗುರುಗಳು, ಸ್ನೇಹಿತರು, ಸಂಗಾತಿ, ಸಹೋದ್ಯೋಗಿಗಳು ಅವರ ನಿಸ್ವಾರ್ಥ ಸಹಕಾರವೇ ನಮ್ಮ ಯಶಸ್ಸಿನ ನಿಶ್ಯಬ್ದ ನೆರಳು. ಜಗತ್ತು ಆ ನೆರಳನ್ನು ಗಮನಿಸದಿದ್ದರೂ, ತುಳಿದು ನಡೆದರೂ, ಅದು ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಕರ್ತವ್ಯವನ್ನು ಮಾತ್ರ ನಿರ್ವಹಿಸುತ್ತಿರುತ್ತದೆ.

ನೆರಳಿನ ಮತ್ತೊಂದು ಅದ್ಭುತ ಸ್ವಭಾವವೆಂದರೆ, ಅದು ಸದಾ ನಮ್ಮೊಂದಿಗಿದ್ದರೂ ಯಾರೊಂದಿಗೂ ಬೆರೆತು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಸಹಸ್ರಾರು ಜನರ ನಡುವೆ ಇದ್ದರೂ ಅದು ನಿಸ್ಸಂಗಿಯಾಗಿರುತ್ತದೆ. ಸಂತೆಯೊಳಗಿದ್ದರೂ ಮೌನದಲ್ಲಿರುವ ಸಂತನಂತೆ ಎಲ್ಲವನ್ನೂ ಸ್ಪರ್ಶಿಸುತ್ತದೆ, ಆದರೆ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇದೇ ನಿಸ್ಸಂಗಿತನವೇ ಭಾರತೀಯ ಸನಾತನ ಜ್ಞಾನ ಪರಂಪರೆಯಲ್ಲಿ ಹೇಳುವ ಅನಾಸಕ್ತಿ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿದಂತೆ, ಕರ್ಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೂ ಫಲದಲ್ಲಿ ಅಂಟಿಕೊಳ್ಳದ ಮನಸ್ಥಿತಿಯೇ ನಿಜವಾದ ಯೋಗ.

ನೆರಳು ನಮಗೆ ಇದೇ ಪಾಠವನ್ನು ಕಲಿಸುತ್ತದೆ. ಅದು ಬೆಳಕು ಮತ್ತು ಕತ್ತಲೆಯ ನಡುವೆ ಇರುತ್ತದೆ; ಆದರೆ ಯಾವುದರಲ್ಲಿಯೂ ಸಂಪೂರ್ಣವಾಗಿ ಲೀನವಾಗುವುದಿಲ್ಲ.

ಬದುಕಿನಲ್ಲಿಯೂ ಹಾಗೆಯೇ, ನಾವು ಲೋಕದ ಮಧ್ಯೆಯೇ ಬದುಕಬೇಕು, ಸಂಬಂಧಗಳ ಮಧ್ಯೆಯೇ ಇರಬೇಕು, ಪ್ರೀತಿಸಬೇಕು, ಕರ್ತವ್ಯ ಮಾಡಬೇಕು; ಆದರೆ ನಮ್ಮ ಮನಸ್ಸಿನ ಸ್ವಾತಂತ್ರ್ಯವನ್ನು ಯಾರ ಕೈಗೂ ಒಪ್ಪಿಸಬಾರದು. ನಾವು ಯಾರಿಗಾದರೂ ಪ್ರೀತಿಯಿಂದ, ವಿಶ್ವಾಸದಿಂದ, ನಿಸ್ವಾರ್ಥವಾಗಿ ನೆರಳಾಗಿ ನಿಂತಾಗ, ಕೆಲವರು ನಮ್ಮನ್ನು ಕೇವಲ ಒಂದು ಸಾಧನವನ್ನಾಗಿ ಬಳಸಿಕೊಂಡು ಮಧ್ಯದಲ್ಲೇ ಕೈಬಿಡಬಹುದು. ನಮ್ಮ ಭಾವನೆಗಳನ್ನು, ನಂಬಿಕೆಗಳನ್ನು ತುಳಿದು ನಡೆದಾಗ ಮನಸ್ಸು ಸಹಜವಾಗಿಯೇ ನೋಯುತ್ತದೆ. ನಂಬಿದವರಿಂದಲೇ ಬರುವ ಕೃತಘ್ನತೆ ಅತ್ಯಂತ ಕಠಿಣವಾದ ಗಾಯವನ್ನು ಉಂಟುಮಾಡುತ್ತದೆ. ಆದರೆ ನೆರಳು ಎಂದಿಗೂ ತನ್ನ ಸ್ವಭಾವವನ್ನು ಬದಲಾಯಿಸುವುದಿಲ್ಲ. ಅದು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ; ಯಾರನ್ನೂ ದೂಷಿಸುವುದಿಲ್ಲ. ಬೆಳಕು ಇರುವವರೆಗೂ ಮತ್ತೆ ಮತ್ತೆ ಮೂಡಿಬರುತ್ತದೆ.

ಹಾಗೆಯೇ ನಾವು ಕೂಡ ಸಂಘದಲ್ಲಿದ್ದರೂ ನಿಸ್ಸಂಗಿತನವನ್ನು, ಸಂಬಂಧಗಳಲ್ಲಿದ್ದರೂ ಅನಾಸಕ್ತಿಯನ್ನು, ಸೇವೆಯಲ್ಲಿದ್ದರೂ ಅಹಂಕಾರರಹಿತ ಮನಸ್ಥಿತಿಯನ್ನು ಬೆಳೆಸಿಕೊಂಡರೆ, ಯಾರೋ ಕೈಬಿಟ್ಟರೆಂಬ ನೋವು ನಮ್ಮನ್ನು ಮುರಿಯುವುದಿಲ್ಲ. ಆಗ ನಮ್ಮ ಬದುಕಿನ ಕೇಂದ್ರಬಿಂದು ಇತರರ ವರ್ತನೆಯಾಗದೆ, ನಮ್ಮ ಸ್ವಂತ ಧರ್ಮವಾಗುತ್ತದೆ.ನೆರಳು ನಮಗೆ ಕಲಿಸುವುದು ಸೋಲಿನ ಮೌನವಲ್ಲ; ಪುನರುತ್ಥಾನದ ಶಕ್ತಿಯನ್ನು. ನೆಲದ ಮೇಲೆ ಬಿದ್ದ ನೆರಳನ್ನು ಎಷ್ಟು ಬಾರಿ ತುಳಿದರೂ ಅದನ್ನು ಕೊಲ್ಲಲು ಸಾಧ್ಯವಿಲ್ಲ. ಬೆಳಕಿನ ಒಂದು ಸಣ್ಣ ಕಿರಣ ಸಾಕು, ಅದು ಮತ್ತೆ ಎದ್ದು ನಿಲ್ಲುತ್ತದೆ. ನಮ್ಮ ಜೀವನವೂ ಹಾಗೆಯೇ. ಸ್ವಾರ್ಥದ ಜಗತ್ತು ನಮ್ಮನ್ನು ಎಷ್ಟೇ ಕೆಳಕ್ಕೆ ತಳ್ಳಿದರೂ, ಅಪಮಾನಗಳ ಭಾರ ಎಷ್ಟೇ ಹೆಚ್ಚಿದರೂ, ನಮ್ಮೊಳಗಿನ ಧರ್ಮದ ಬೆಳಕು ಆರದವರೆಗೆ ನಾವು ಎಂದಿಗೂ ಸೋಲುವುದಿಲ್ಲ. ನಮ್ಮನ್ನು ಉಪಯೋಗಿಸಿಕೊಂಡು ಹೋದವರನ್ನು ನೆನೆದು ಕರಗುವುದಕ್ಕಿಂತ, ನಮ್ಮೊಳಗಿನ ಸತ್ಕರ್ಮದ ಬೆಳಕನ್ನು ಕಾಪಾಡಿಕೊಳ್ಳುವುದು ಶ್ರೇಷ್ಠ.

ನೆರಳು ತನ್ನನ್ನು ತುಳಿದವರಿಗೂ ತಂಪಾದ ಆಶ್ರಯವನ್ನೇ ನೀಡುವಂತೆ, ನಮ್ಮನ್ನು ನೋಯಿಸಿದವರಿಗೂ ನಮ್ಮ ಸಜ್ಜನಿಕೆಯ ಒಳ್ಳೆಯತನವವೇ ಉತ್ತರವಾಗಬೇಕು. ಏಕೆಂದರೆ ಮಹತ್ವವು ಪ್ರತೀಕಾರದಲ್ಲಿಲ್ಲ; ನಮ್ಮ ಸ್ವಭಾವವನ್ನು ಕಳೆದುಕೊಳ್ಳದಿರುವುದರಲ್ಲಿ ಇದೆ. ಪರಿಸ್ಥಿತಿಗಳು ಎಷ್ಟೇ ಬದಲಾದರೂ, ಜನರು ಎಷ್ಟೇ ಬದಲಾದರೂ, ನಮ್ಮ ಒಳಿತಿನ ಗುಣ ಮಾತ್ರ ಬದಲಾಗದಿರುವುದು ಬದುಕಿನ ನಿಜವಾದ ವಿಜಯ. ಬಹುಶಃ ಅದಕ್ಕಾಗಿಯೇ ಪ್ರಕೃತಿ ನೆರಳನ್ನು ಕೇವಲ ಬೆಳಕಿನ ಅನುಪಸ್ಥಿತಿಯಾಗಿ ಸೃಷ್ಟಿಸಿಲ್ಲ; ಬದುಕಿನ ಮಹತ್ತರ ತತ್ವಗಳನ್ನು ಪ್ರತಿದಿನ ಮೌನವಾಗಿ ಬೋಧಿಸುವ ಗುರುವನ್ನಾಗಿ ನಮ್ಮ ಮುಂದಿಟ್ಟಿದೆ.ಮಗನ ಮುಗ್ಧ ಪ್ರಶ್ನೆಯ ಮೂಲಕ ಬದುಕಿನ ಈ ದೊಡ್ಡ ಜ್ಞಾನದ ದರ್ಶನ ಮಾಡಿಸಿದ ಆ ಗುರುಕಾರುಣ್ಯಕ್ಕೆ ಮನಸ್ಸು ಕೃತಜ್ಞತೆಯಿಂದ ತುಂಬಿತು. ಆ ದಿನ ನನಗೆ ಅರಿವಾದದ್ದು ಒಂದೇ – ನೆರಳು ಕೇವಲ ನಮ್ಮನ್ನು ಹಿಂಬಾಲಿಸುವುದಿಲ್ಲ; ಬದುಕಿನ ದಾರಿಯನ್ನೂ ತೋರಿಸುತ್ತದೆ. ಅದರ ಪಾಠವನ್ನು ಕಲಿತು, ನೆರಳಿನಂತೆ ನಿಸ್ವಾರ್ಥವಾಗಿ, ನಿಸ್ಸಂಗವಾಗಿ, ಸ್ಥಿರವಾಗಿ ಬದುಕಲು ಅಣಿಯಾಗುವ.  

ತೊಂದರೆ ಕೊಟ್ಟವರೆದುರು ಉರಿದು ಬೀಳುವ ಕೆಂಡ ಹೊತ್ತ ಜಮದಗ್ನಿಯ ಕೊರಳಿನ ಮಂದಿಯಾಗದೆ, ಮೌನದಿ ಎಲ್ಲ ಸಹಿಸಿ ಮತ್ತೆ ಮತ್ತೆ ತಂಪನ್ನೇ ನೀಡಲು ಯತ್ನಿಸುವ ನೆರಳಿನಂತಾಗುವ.

-ಡಾ.ರವೀಶ್ ಎನ್.ಎಸ್

Leave a Reply

Your email address will not be published. Required fields are marked *