
ರಿಪ್ಪನ್ಪೇಟೆ: ಸಮೀಪದ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಸರ್ವೇ ನಂ. 99ರಲ್ಲಿ ನಡೆದಿರುವ ಅಕ್ರಮ ಭೂ ಒತ್ತುವರಿ ಹಾಗೂ ಕಾಡು ನಾಶದ ವಿರುದ್ಧ ಸಮಟಗಾರು ಗ್ರಾಮಸ್ಥರು ಭಾನುವಾರ ತೀವ್ರ ಪ್ರತಿಭಟನೆ ನಡೆಸಿದರು. ಹಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆರೋಪದಂತೆ, ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸುಮಾರು 10 ಎಕರೆ ಪ್ರದೇಶದಲ್ಲಿ ಕಾಡು ತೆರವುಗೊಳಿಸಿ ಸಾಗುವಳಿ ಮಾಡಲಾಗಿದೆ. ಅಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬೀಟೆ, ಸಾಗುವಾನಿ, ಹೊನ್ನೆ ಸೇರಿದಂತೆ ಹಲವು ಅಪರೂಪದ ಕಾಡುಮರಗಳನ್ನು ಕಡಿದು ಅರಣ್ಯ ಸಂಪತ್ತಿಗೆ ಭಾರೀ ಹಾನಿ ಉಂಟುಮಾಡಲಾಗಿದೆ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಅಕ್ರಮ ಭೂ ಒತ್ತುವರಿ ಹೆಚ್ಚುತ್ತಿದ್ದು, ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮೌನವೇ ಇಂತಹ ಪ್ರಕರಣಗಳಿಗೆ ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅರಣ್ಯ ಉಳಿಸುವ ಬದಲು ಒತ್ತುವರಿದಾರರಿಗೆ ಬೆಂಬಲ ಸಿಗುತ್ತಿರುವುದು ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ಕಿಡಿಕಾರಿದರು.
ಈ ಹಿಂದೆ ನಡೆದ ಪ್ರತಿಭಟನೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಹೊಸನಗರ ತಹಶೀಲ್ದಾರ್, ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಹುಂಚ ನಾಡಕಚೇರಿಯ ಉಪತಹಶೀಲ್ದಾರ್ ಮೂಲಕ ವರದಿ ತರಿಸಿಕೊಂಡು ಕ್ರಮಕ್ಕೆ ಸೂಚನೆ ನೀಡಿದ್ದರೂ ಇದುವರೆಗೆ ಕಾರ್ಯಾಚರಣೆ ನಡೆದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಜಾಗವನ್ನು ಯಾವುದೇ ಕಾರಣಕ್ಕೂ ಖಾಸಗಿಯವರ ಪಾಲಾಗದಂತೆ ತಡೆಯಬೇಕು. ಅಕ್ರಮ ಒತ್ತುವರಿ ತೆರವುಗೊಳಿಸಿ ಅರಣ್ಯ ಬೆಳೆಸಿ ಪರಿಸರ ಸಂರಕ್ಷಣೆ ಮಾಡಲು ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮುಂದಿನ ಮೂರು ರಿಂದ ನಾಲ್ಕು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಹೊಸನಗರ ತಹಶೀಲ್ದಾರ್ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಆಶಾ ರವೀಂದ್ರ, ಬಿಜೆಪಿ ಮಹಾಶಕ್ತಿ ಕೇಂದ್ರದ ಮುಖಂಡ ಹರೀಶ ಹೊನ್ನೆಬೈಲು, ವಿಷು ಹೊನ್ನೆಬೈಲು, ರಾಜೇಂದ್ರ ಸಮಟಗಾರು, ದಲಿತ ಮುಖಂಡ ಶಿವರಾಜ್ ಸಮಟಗಾರು, ನಟೇಶ್ ಬಿಲ್ಲೇಶ್ವರ, ಗಿರೀಶ್ ಜಂಬಳ್ಳಿ, ಧರ್ಮರಾಜ್, ಸದಾನಂದ, ಈಶ್ವರ, ಶಿವಕುಮಾರ, ಸದಾಶಿವ, ನಾಗರತ್ನ, ಯಶೋಧ ಬಸಪ್ಪಗೌಡ, ಕೃಷ್ಣ ನಾಯ್ಕ್, ನಾಗಭೂಷಣ, ಪೂರ್ಣೇಶ್, ಮೀನಾಕ್ಷಿ ನಾಗೇಂದ್ರ, ರಾಜಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.



















Leave a Reply