ಪರಿಸರ ಸಂರಕ್ಷಣೆ, ಅಂತರ್ಜಲ ಮಟ್ಟ ಏರಿಕೆ ಹಾಗೂ ಪ್ರಾಣಿ – ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸುವ ಉದ್ದೇಶ
ರಿಪ್ಪನ್ ಪೇಟೆ: ಬಾಳೂರು ಗ್ರಾಮ ಪಂಚಾಯತಿಯ ಕೆದಲಗುಡ್ಡೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳಲಾಗುತ್ತಿರುವ ದ್ಯಾವಸ್ ಕೆರೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿತು.

ಕಾರ್ಯಕ್ರಮದಲ್ಲಿ ಕೆರೆ ಯೋಜನೆ ಅಭಿಯಂತರ ಹರೀಶ್ ಪ್ರಸ್ತಾವಿಕವಾಗಿ ಮಾತನಾಡಿ, ಗ್ರಾಮಸ್ಥರ ಸಹಕಾರ ಮತ್ತು ಗ್ರಾಮ ಸಮಿತಿಯ ನಿರ್ಣಯದ ಆಧಾರದ ಮೇಲೆ ಪಂಚಾಯಿತಿಯ ಅನುಮೋದನೆಯೋದಿಗೆ, ಕ್ಷೇತ್ರ ದಿಂದ ಯೋಜನೆಗೆ ಅನುದಾನ ಮಂಜೂರಾಗಿದೆ ಎಂದರು. ಕೆರೆ ಅಭಿವೃದ್ಧಿ ಕಾಮಗಾರಿಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಮಸ್ಥರೇ ಹೊತ್ತುಕೊಳ್ಳಲಿದ್ದು, ಇದರ ಮೂಲಕ ಪರಿಸರ ಸಂರಕ್ಷಣೆ, ಅಂತರ್ಜಲ ಮಟ್ಟ ಏರಿಕೆ ಹಾಗೂ ಪ್ರಾಣಿ – ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ನಿರ್ದೇಶಕ ಮುರಳಿಧರ್ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹತ್ತು -ಹಲವು ಸೇವಾ ಕಾರ್ಯಗಳು ನಡೆಯುತ್ತಿವೆ. ಈ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿಯೂ ಗ್ರಾಮಸ್ಥರ ಸಕ್ರಿಯ ಭಾಗವಹಿಸುವಿಕೆಯಿಂದ ಈ ಕಾಮಗಾರಿ ಶೀಘ್ರ ಪೂರ್ಣಗೊಂಡು ಎಲ್ಲರಿಗೂ ಉಪಯೋಗವಾಗಲಿ ಎಂದು ಆಶಿಸಿದರು.
ಜನಜಾಗೃತಿ ಸಮಿತಿಯ ನಾಗರತ್ನ ದೇವರಾಜ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಯೋಜನೆಗಳು ಸಮಾಜಮುಖಿಯಾಗಿದ್ದು ಸರ್ವರ ಹಿತವನ್ನು ಬಯಸುವುದಾಗಿವೆ. ಈ ಯೋಜನೆಗಳನ್ನು ಶ್ರೀದೇವರ ಪ್ರಸಾದದಂತೆ ಸ್ವೀಕರಿಸಿ, ಕೆರೆಯನ್ನು ಇನ್ನಷ್ಟು ಸುಂದರ ಹಾಗೂ ಉಪಯುಕ್ತವಾಗಿಸುವಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ವ್ಯವಸ್ಥಾಪನ ಸಮಿತಿಯ ನಾಗರಾಜ್, ಶನೇಶ್ವರ ದೇವಸ್ಥಾನದ ಸಮಿತಿಯ ನಾಗರಾಜ್ ಎಂಐಎಸ್ ಯೋಜನಾಧಿಕಾರಿ ಬಾಲಕೃಷ್ಣ,ತಾಲೂಕು ಯೋಜನಾಧಿಕಾರಿ ಪ್ರದೀಪ್, ಉದಯ್ ಆಚಾರ್, ನಟರಾಜ್, ಮಂಜುನಾಥ್, ಜಯಂತಿ,ರಾಜೇಶ್ವರಿ,ರಮ್ಯಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
















Leave a Reply