
ಹೊಸನಗರ: ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ (PMJJBY)ಯಡಿ ನೋಂದಾಯಿಸಿಕೊಂಡಿದ್ದ ಗ್ರಾಹಕರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಹೊಸನಗರ ಶಾಖೆಯು ತ್ವರಿತವಾಗಿ ಪರಿಹಾರ ಮೊತ್ತ ಒದಗಿಸಿ ಮಾನವೀಯ ಸ್ಪಂದನೆ ಮೆರೆದಿದೆ.
ಹೊಸನಗರ ತಾಲೂಕಿನ ಬಾಳೆಕೊಪ್ಪ ನಿವಾಸಿ ಶ್ರೀಮತಿ ರತ್ನ ಅವರು ದಿನಾಂಕ 13.11.2025ರಂದು ಅನಾರೋಗ್ಯ ಕಾರಣದಿಂದಾಗಿ ಅಲ್ಪಕಾಲದಲ್ಲೇ ನಿಧನರಾಗಿದ್ದರು. ಅವರು ಹೊಸನಗರದ SBI ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಸಾಮಾಜಿಕ ಭದ್ರತೆಯ ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯಡಿ ರೂ.436 ಪಾವತಿಸಿ ವಿಮಾ ನೋಂದಣಿ ಮಾಡಿಕೊಂಡಿದ್ದರು.ನಿಧನರಾದ ರತ್ನ ಅವರ ಪತಿ ಶ್ರೀ ಬಾಬು ಗೋಪಾಲ್ ಹಾಂಡ ಅವರು ದಿನಾಂಕ 23.12.2025ರಂದು ಬ್ಯಾಂಕನ್ನು ಸಂಪರ್ಕಿಸಿದ ತಕ್ಷಣವೇ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ, ಯಾವುದೇ ವಿಳಂಬವಿಲ್ಲದೆ ಕ್ರಮ ಕೈಗೊಂಡು, ಯೋಜನೆಯ ಒಟ್ಟು ಪರಿಹಾರ ಮೊತ್ತ ರೂ.2 ಲಕ್ಷವನ್ನು ದಿನಾಂಕ 27.12.2025ರೊಳಗೆ ನಾಮಿನಿಯವರ ಖಾತೆಗೆ ಜಮೆ ಮಾಡಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಾಧವ್, ಅಧಿಕಾರಿ ಸರ್ವೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸರ್ಕಾರ ಜಾರಿಗೊಳಿಸಿರುವ ಈ ಸಾಮಾಜಿಕ ಭದ್ರತಾ ವಿಮಾ ಯೋಜನೆಯ ಪ್ರಯೋಜನಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಭದ್ರತೆ ಒದಗಿಸುವ PMJJBY ಯೋಜನೆ ಅಕಾಲಿಕ ಸಾವು ಸಂಭವಿಸಿದ ಸಂದರ್ಭಗಳಲ್ಲಿ ಕುಟುಂಬಗಳಿಗೆ ಆರ್ಥಿಕ ಆಸರೆಯಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಅಭಿಪ್ರಾಯಪಟ್ಟರು.ಸಮಯೋಚಿತ ಸೇವೆಯ ಮೂಲಕ SBI ಹೊಸನಗರ ಶಾಖೆ ಸಾರ್ವಜನಿಕ ವಿಶ್ವಾಸಕ್ಕೆ ಮತ್ತೊಮ್ಮೆ ಭದ್ರತೆ ನೀಡಿದೆ.












Leave a Reply