ಕೃಷಿಯಲ್ಲೂ ಸ್ಟಾರ್ಟ್ಅಪ್ ಮಾದರಿ | ಪಪ್ಪಾಯ ನರ್ಸರಿ ಕನಸಿನತ್ತ ಯುವಕ
ಎನ್.ಕಾರ್ತಿಕ್ ಕೌಂಡಿನ್ಯ
ರಿಪ್ಪನ್ ಪೇಟೆ : ಹೊಸನಗರ ತಾಲೂಕಿನ ಹಾರಂಬಳ್ಳಿ ಗ್ರಾಮದ ಗಾಜಿನಗೋಡು ನಿವಾಸಿ, ಕೇವಲ 28 ವರ್ಷದ ಯುವ ರೈತ ಮಂಜುನಾಥ್ ಅವರು ಪಪ್ಪಾಯ ಕೃಷಿಯಲ್ಲಿ ಸಾಧನೆ ಮಾಡಿ ಇತರ ಯುವಕರಿಗೆ ಮಾದರಿಯಾಗಿದ್ದಾರೆ. ಬದುಕಿನ ಸಂಕಷ್ಟಗಳ ನಡುವೆ ಕೃಷಿಯನ್ನೇ ಆಯ್ಕೆ ಮಾಡಿಕೊಂಡು, ಅದನ್ನೇ ಯಶಸ್ಸಿನ ದಾರಿಯಾಗಿ ರೂಪಿಸಿಕೊಂಡಿರುವುದು ಅವರ ವಿಶೇಷತೆ. ತಂದೆಯವರ ಅಕಾಲಿಕ ನಿಧನದ ನಂತರ ತಾಯಿ ಸುಶೀಲಮ್ಮ ಅವರೊಂದಿಗೆ ಕುಟುಂಬದ ಜವಾಬ್ದಾರಿಯನ್ನು ಹೊತ್ತ ಮಂಜುನಾಥ್, ಹಲವಾರು ಬೆಳೆಗಳನ್ನು ಪ್ರಯತ್ನಿಸಿದರೂ ನಿರೀಕ್ಷಿತ ಫಲ ಸಿಗಲಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳದೆ, ಆತ್ಮೀಯರ ಸಲಹೆ ಪಡೆದು ಯಶಸ್ವಿ ರೈತರ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಆ ಅಧ್ಯಯನವೇ ಅವರಿಗೆ ಪಪ್ಪಾಯ ಕೃಷಿಯ ಕಡೆಗೆ ದಾರಿ ತೋರಿಸಿತು.

ಆರಂಭದಲ್ಲಿ 1.75 ಎಕರೆ ಭೂಮಿಯಲ್ಲಿ ಅಡಿಕೆ ಬೆಳೆ ಜೊತೆಗೆ ಮಿಶ್ರ ಬೆಳೆಯಾಗಿ ಪಪ್ಪಾಯ ಬೆಳೆದ ಅವರು, ಉತ್ತಮ ಫಲಿತಾಂಶ ಕಂಡು ಇಂದು ನಾಲ್ಕು ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದು ಪ್ರತಿ ಎಕರೆಗೆ ಸುಮಾರು 4.5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಎಕರೆಗೆ 1.5 ಲಕ್ಷ ಖರ್ಚು ಬರುತ್ತದೆ. ಸರಿಯಾದ ಪೋಷಕಾಂಶ ನಿರ್ವಹಣೆ, ನೀರಾವರಿ ವ್ಯವಸ್ಥೆ, ಸಮಯಕ್ಕೆ ಗೊಬ್ಬರ ಹಾಗೂ ಮಾರುಕಟ್ಟೆ ಅರಿವು ಈ ನಾಲ್ಕು ಅಂಶಗಳು ಅವರ ಯಶಸ್ಸಿನ ಮೂಲಮಂತ್ರ ಎಂದು ಅವರು ಹೇಳುತ್ತಾರೆ.
ಪಪ್ಪಾಯ ಬೆಳೆಯಲ್ಲಿ ಸಾಧನೆ ಮಾಡಿದ ಮಂಜುನಾಥ್ ಈಗ ಗುಣಮಟ್ಟದ ಪಪ್ಪಾಯ ಸಸಿಗಳನ್ನು ಉತ್ಪಾದಿಸುವ ನರ್ಸರಿ ಆರಂಭಿಸುವ ಯೋಜನೆ ಹೊಂದಿದ್ದಾರೆ. ಈಗಾಗಲೇ 6 ಸಾವಿರ ಗಿಡಗಳಿಗೆ ಮುಂಗಡ ಆರ್ಡರ್ ಪಡೆದಿದ್ದು, ರೈತರಿಗೆ ಆರೋಗ್ಯಕರ ಮತ್ತು ಉತ್ಪಾದಕ ಸಸಿಗಳನ್ನು ಒದಗಿಸುವ ಉದ್ದೇಶ ಹೊಂದಿದ್ದಾರೆ.
“ಕೃಷಿ ಲಾಭದಾಯಕವಲ್ಲ” ಎಂಬ ನಕಾರಾತ್ಮಕ ಮನೋಭಾವಕ್ಕೆ ಗಾಜಿನಗೋಡು ಮಂಜುನಾಥ್ ಅವರ ಸಾಧನೆಯೇ ಸ್ಪಷ್ಟ ಉತ್ತರ. ಸರಿಯಾದ ಬೆಳೆ ಆಯ್ಕೆ, ವೈಜ್ಞಾನಿಕ ಕೃಷಿ ವಿಧಾನ, ಮಾರುಕಟ್ಟೆ ಅರಿವು ಹಾಗೂ ನಿರಂತರ ಶ್ರಮ – ಈ ನಾಲ್ಕು ಅಂಶಗಳನ್ನು ಅಳವಡಿಸಿಕೊಂಡರೆ ಕೃಷಿಯಲ್ಲಿಯೇ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಅವರು ತಮ್ಮ ಕಾರ್ಯದಿಂದಲೇ ತೋರಿಸಿದ್ದಾರೆ.
ಸಂಕಷ್ಟಗಳು ಬಂದಾಗ ಹಿಂಜರಿಯದೆ, ಪ್ರತಿಯೊಂದು ಸವಾಲನ್ನೂ ಪಾಠವಾಗಿ ಸ್ವೀಕರಿಸಿ ಅವಕಾಶವನ್ನಾಗಿ ರೂಪಿಸಿಕೊಂಡ ಅವರ ಹಾದಿ ಇಂದು ಗ್ರಾಮೀಣ ಯುವಕರಿಗೆ ದಾರಿದೀಪವಾಗಿದೆ. ಉದ್ಯೋಗಕ್ಕಾಗಿ ನಗರಗಳತ್ತ ಮುಖ ಮಾಡುವ ಕಾಲದಲ್ಲಿ, ಸ್ವಗ್ರಾಮದಲ್ಲೇ ಕೃಷಿಯ ಮೂಲಕ ಗೌರವಯುತ ಜೀವನ ಕಟ್ಟಿಕೊಳ್ಳಬಹುದು ಎಂಬ ವಿಶ್ವಾಸವನ್ನು ಮಂಜುನಾಥ್ ಮೂಡಿಸಿದ್ದಾರೆ .
ಮಂಜುನಾಥ್ :9880348037
ಸರಣಿ – 2 ರಲ್ಲಿ ಪಪ್ಪಾಯ ಕೃಷಿಯ ಬೇಸಾಯಕ್ಕೆ ಸಂಬಂಧಿಸಿದ ಮಾಹಿತಿಗಳು ಮುಂದಿನ ಲೇಖನದಲ್ಲಿ ನಿಮಗೆ ಲಭ್ಯವಾಗಲಿದೆ.









Leave a Reply