ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ – ಕನ್ನಡದ ಕಲೆಗೆ ಜಾಗತಿಕ ಮೆರುಗು

NAADI NEWS 20260305 094654 0000 ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ - ಕನ್ನಡದ ಕಲೆಗೆ ಜಾಗತಿಕ ಮೆರುಗು
Spread the love

ಯಕ್ಷಗಾನ ಲೋಕದಲ್ಲೊಂದು ಐತಿಹಾಸಿಕ ಮೈಲಿಗಲ್ಲು – ಪ್ರಪ್ರಥಮ ಬಾರಿಗೆ ಜರ್ಮನ್ ಭಾಷೆಯಲ್ಲಿ ಯಕ್ಷಗಾನ

A historic milestone as Yakshagana was performed in German for the first time in Munich, Germany, by Yakshadhruva Europe children, receiving overwhelming appreciation from the German audience.

ಬರ್ಲಿನ್ : ಜರ್ಮನಿಯ ಮ್ಯೂನಿಕ್ ನಗರದಲ್ಲಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯುವ ಮೂಲಕ ಕರಾವಳಿ ಕರ್ನಾಟಕದ ಪ್ರಸಿದ್ಧ ಜನಪದ ಕಲೆಯಾದ ಯಕ್ಷಗಾನಕ್ಕೆ ಹೊಸ ಐತಿಹಾಸಿಕ ಮೈಲುಗಲ್ಲು ನಿರ್ಮಾಣವಾಗಿದೆ. ಫೆಬ್ರವರಿ 28, 2026ರಂದು ನಡೆದ ಈ ವಿಶಿಷ್ಟ ಕಾರ್ಯಕ್ರಮವನ್ನು ಯಕ್ಷಧ್ರುವ ಯೂರೋಪ್ ಮಕ್ಕಳ ತಂಡ ಅದ್ದೂರಿಯಾಗಿ ಯಕ್ಷಗಾನ ಪ್ರದರ್ಶಿಸಿತು. ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆದಿದ್ದು ಯೂರೋಪಿನ ಕಲಾ ವಲಯದಲ್ಲಿಯೇ ಒಂದು ಅಪರೂಪದ ಸಾಧನೆಯಾಗಿ ಗಮನ ಸೆಳೆದಿದೆ.

ಈ ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳು 5ರಿಂದ 14 ವರ್ಷದೊಳಗಿನವರಾಗಿದ್ದು, ಜರ್ಮನಿಯಲ್ಲಿ ಹುಟ್ಟಿ ಬೆಳೆದ ಜರ್ಮನ್ ಮೂಲದ ಮಕ್ಕಳು ಎಂಬುದು ಕಾರ್ಯಕ್ರಮದ ಪ್ರಮುಖ ವಿಶೇಷತೆಯಾಗಿದೆ. ತಮ್ಮದೇ ಭಾಷೆಯಲ್ಲಿ ಯಕ್ಷಗಾನವನ್ನು ಅಭಿನಯಿಸುವ ಮೂಲಕ ಈ ಮಕ್ಕಳು ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದರು. ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಗುರು ಅಜಿತ್ ಪ್ರಭು ಮಾಸ್ತಿಕಟ್ಟೆ ಅವರ ಮಾರ್ಗದರ್ಶನದಲ್ಲಿ ಈ ಪ್ರದರ್ಶನ ರೂಪುಗೊಂಡಿದ್ದು, ಜರ್ಮನ್ ಪ್ರೇಕ್ಷಕರಿಗೆ ಯಕ್ಷಗಾನವನ್ನು ಪರಿಚಯಿಸುವ ಮಹತ್ವದ ಪ್ರಯತ್ನವಾಗಿತ್ತು. ಕಾರ್ಯಕ್ರಮದ ಸಿದ್ಧತೆಗಳು ಹಲವು ದಿನಗಳ ಮುಂಚಿತವಾಗಿಯೇ ಆರಂಭಗೊಂಡಿದ್ದವು. ವೇದಿಕೆ ಮತ್ತು ಗ್ರೀನ್ ರೂಂ ವ್ಯವಸ್ಥೆ, ವೇಷಭೂಷಣ, ಮೇಕಪ್, ಅಭ್ಯಾಸ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲಾಗಿತ್ತು. ಯಕ್ಷಧ್ರುವ ಯೂರೋಪ್ ಕುಟುಂಬದ ಸದಸ್ಯರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಒಗ್ಗೂಡಿ ಕೆಲಸ ಮಾಡಿದರು. ಫ್ರಾಂಕ್‌ಫರ್ಟ್, ಸ್ಟುಟ್‌ಗಾರ್ಟ್, ನ್ಯೂರಂಬರ್ಗ್ ಮತ್ತು ಮ್ಯೂನಿಕ್ ನಗರಗಳಿಂದ ಬಂದ ಮಕ್ಕಳು, ಪೋಷಕರು ಹಾಗೂ ಸ್ವಯಂಸೇವಕರು ಸೇರಿ ತಂಡವಾಗಿ ಕೆಲಸ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕಾರ್ಯಕ್ರಮವನ್ನು ಜರ್ಮನ್ ಅತಿಥಿಗಳಿಂದ ಸಂಪ್ರದಾಯಬದ್ಧ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಇದು ಎರಡು ಸಂಸ್ಕೃತಿಗಳ ನಡುವೆ ಹೊಂದಾಣಿಕೆ ಮತ್ತು ಪರಸ್ಪರ ಗೌರವದ ಸಂಕೇತವಾಗಿತ್ತು. ಬಳಿಕ “ಯಕ್ಷಗಾನ ಇನ್ ಯೂರೋಪ್” ಎಂಬ ಜರ್ಮನ್ ಭಾಷೆಯ ಡಾಕ್ಯುಮೆಂಟರಿ ಪ್ರದರ್ಶನ ಮಾಡಲಾಗಿದ್ದು, ಯಕ್ಷಗಾನದ ಇತಿಹಾಸ, ಅದರ ವೈಶಿಷ್ಟ್ಯಗಳು ಹಾಗೂ ಯೂರೋಪಿನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಪ್ರೇಕ್ಷಕರಿಗೆ ವಿವರ ನೀಡಲಾಯಿತು.

ನಂತರ ನಡೆದ ನೇರ ಯಕ್ಷಗಾನ ಪ್ರದರ್ಶನದಲ್ಲಿ ಬಣ್ಣಬಣ್ಣದ ವೇಷಭೂಷಣ, ಅದ್ಭುತ ಮೇಕಪ್ ಹಾಗೂ ಭಾವಪೂರ್ಣ ಅಭಿನಯ ಪ್ರೇಕ್ಷಕರ ಗಮನ ಸೆಳೆಯಿತು. ಹಾಸ್ಯ, ಭಾವನೆ ಮತ್ತು ಕಥಾನಕದ ಮನಮೋಹಕ ನಿರೂಪಣೆಯೊಂದಿಗೆ ಮಕ್ಕಳ ತಂಡ ಆತ್ಮವಿಶ್ವಾಸದಿಂದ ಅಭಿನಯಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಯಕ್ಷಗಾನವನ್ನು ಮೊದಲ ಬಾರಿಗೆ ನೋಡುತ್ತಿದ್ದ ಅನೇಕ ಜರ್ಮನ್ ಪ್ರೇಕ್ಷಕರು ಈ ಪ್ರದರ್ಶನವನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸಿದರು.

img 20260303 wa0005781684631330587939 ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ - ಕನ್ನಡದ ಕಲೆಗೆ ಜಾಗತಿಕ ಮೆರುಗು

ಸಭಾಂಗಣ ಸಂಪೂರ್ಣವಾಗಿ ಭರ್ತಿಯಾಗಿದ್ದು, ಸುಮಾರು 80 ಶೇಕಡಾ ಪ್ರೇಕ್ಷಕರು ಜರ್ಮನ್ ಮೂಲದವರಾಗಿದ್ದರು. ಅನೇಕರು ಗಂಟೆಗಳ ಕಾಲ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದ ದೃಶ್ಯ ಯೂರೋಪಿನ ವೇದಿಕೆಯಲ್ಲಿ ಅಪರೂಪದ ಸಂಗತಿಯಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಪ್ರೇಕ್ಷಕರು ಸಂಪೂರ್ಣ ಮೌನದಿಂದ ಕಾರ್ಯಕ್ರಮವನ್ನು ಆನಂದಿಸಿದದ್ದು ಯಕ್ಷಗಾನದ ಕಲಾತ್ಮಕ ಶಕ್ತಿಯನ್ನು ಸ್ಪಷ್ಟವಾಗಿ ತೋರಿಸಿತು.

ಜರ್ಮನ್ ಪ್ರೇಕ್ಷಕರಿಂದ ಸಿಕ್ಕಿತು ‘ಸ್ಟ್ಯಾಂಡಿಂಗ್ ಓವೇಶನ್’
ಸಭಾಂಗಣದಲ್ಲಿದ್ದ ಶೇ. 80ಕ್ಕೂ ಹೆಚ್ಚು ಪ್ರೇಕ್ಷಕರು ಜರ್ಮನ್ ನಾಗರಿಕರಾಗಿದ್ದು, ಸ್ಥಳೀಯ ಭಾಷೆಯಲ್ಲೇ ನಡೆದ ಯಕ್ಷಗಾನ ಅವರ ಮನಸ್ಸನ್ನು ನೇರವಾಗಿ ಸ್ಪರ್ಶಿಸಿತು. ಪ್ರದರ್ಶನದ ನಂತರ ಇಡೀ ಸಭಾಂಗಣ ಎದ್ದು ನಿಂತು ಕರತಾಡನ ಮಾಡುವ ಮೂಲಕ ಮಕ್ಕಳ ಅದ್ಭುತ ಪ್ರತಿಭೆಯನ್ನು ಕೊಂಡಾಡಿತು.

ಜರ್ಮನ್ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದೆಯೂ ಇಂತಹ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುವಂತೆ ಅಭಿಪ್ರಾಯ ವ್ಯಕ್ತವಾಯಿತು. ವಿಶೇಷವಾಗಿ ಕಾರ್ಯಕ್ರಮದ ಬಳಿಕ ಜರ್ಮನ್ ಮಕ್ಕಳು ಯಕ್ಷಗಾನದ ಕುರಿತು ಕೇಳಿದ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರಿಸಿದ ಕ್ಷಣ ಎಲ್ಲರಿಗೂ ಸಂತಸದ ಅನುಭವ ನೀಡಿತು.

img 20260303 wa00047222874188426642035 ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ - ಕನ್ನಡದ ಕಲೆಗೆ ಜಾಗತಿಕ ಮೆರುಗು

ಮೊದಲ ಬಾರಿಗೆ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಮಕ್ಕಳಿಗೆ ಯಕ್ಷಗಾನ ಗುರು ಅಜಿತ್ ಪ್ರಭು ಮಾಸ್ತಿಕಟ್ಟೆ ಅವರು ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಈ ಕಾರ್ಯಕ್ರಮ ಯಕ್ಷಗಾನವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದ್ದು, ವಿವಿಧ ಸಂಸ್ಕೃತಿಗಳನ್ನು ಒಂದಾಗಿಸುವ ಕಲೆಯ ಶಕ್ತಿಯನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.

img 20260303 wa00032711594347422626914 ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ - ಕನ್ನಡದ ಕಲೆಗೆ ಜಾಗತಿಕ ಮೆರುಗು

ಈ ಐತಿಹಾಸಿಕ ಸಾಧನೆಯ ಮೂಲಕ ಯಕ್ಷಗಾನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಅವಕಾಶಗಳು ತೆರೆದಿದ್ದು, ಯೂರೋಪಿನಲ್ಲಿ ಯಕ್ಷಗಾನದ ಪ್ರಸಾರಕ್ಕೆ ಇದೊಂದು ಮಹತ್ವದ ಹೆಜ್ಜೆ ಎನ್ನಬಹುದು.


Spread the love

Leave a Reply

Your email address will not be published. Required fields are marked *