ಹೊಸನಗರ : ತ್ಯಾಗರಾಜರ ಕೀರ್ತನೆಗಳು ಸಾರ್ವಕಾಲಿಕವಾದದ್ದು. ಸಂಗೀತಗಾರರು ಭಾಷೆ ಪ್ರಾಂತಗಳ ಭೇದವಿಲ್ಲದೆ ತ್ಯಾಗರಾಜ ಮಹೋತ್ಸವವನ್ನು ಆಚರಿಸುತ್ತಾರೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ ತಿಳಿಸಿದ್ದಾರೆ.
ಕಾರಣಗಿರಿ ಶ್ರೀ ಸಿದ್ಧಿ ವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗ ಕಾರಣಗಿರಿ ಆಶ್ರಯದಲ್ಲಿ ನಡೆದ ತ್ಯಾಗರಾಜ ಆರಾಧನೆ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿ

ತ್ಯಾಗರಾಜರು 96 ಕೋಟಿ ರಾಮನಾಮ ಜಪಿಸಿ ಶ್ರೀರಾಮನಾಮ ಸಾಕ್ಷಾತ್ಕಾರ ಪಡೆದಿದ್ದರು. ಅವರಿಂದ ರಚಿಸಲ್ಪಟ್ಟ ಸಂಸ್ಕೃತ ಮತ್ತು ತೆಲುಗು ಭಾಷೆಯ 2400 ಕೃತಿಗಳಲ್ಲಿ ಹೆಚ್ಚು ಪಾಲು ರಾಮಾಯಣದ ಸನ್ನಿವೇಶಗಳನ್ನು ಕಾಣಬಹುದು. 5 ರಾಗಗಳಲ್ಲಿ ರಚಿಸಿರುವ ಪಂಚರತ್ನ ಕೀರ್ತನೆಗಳ ಗಾಯನ ತುಂಬ ಜನಪ್ರಿಯವಾಗಿವೆ ಎಂದವರು ಹೇಳಿದರು.
ಗ್ರಾಮಭಾರತಿ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಕೆ. ಎಸ್, ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್, ಆರತಿ ಮಹೇಶ್, ಗಾಯಕ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಗಾನಸುಧ ಸಂಗೀತ ಶಾಲೆ, ರಾಗಲಹರಿ ಸಂಗೀತ ಶಾಲೆ, ಸರಸ್ವತಿ ಸಂಗೀತ ಶಾಲೆ, ಅಮೃತ ಶಾಲೆ ನಗರ, ಶಾರದಾ ಸಂಗೀತ ಶಾಲೆ ಮತ್ತಿತರ ಸಂಗೀತ ಶಾಲೆಗಳ ವಿದ್ಯಾರ್ಥಿಗಳಿಂದ ಕೀರ್ತನೆಗಳ ಗಾಯನ ನಡೆಯಿತು. ನಂತರ ಬೆಂಗಳೂರಿನ ಶ್ರಿಗುರುಗುಹ ಸಂಗೀತ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸಂಗೀತ ಕಚೇರಿ ನಡೆಸಿಕೊಟ್ಟರು.
ಮೃದಂಗದಲ್ಲಿ ಶ್ರೀ ರಾಜೀವ್ ಮತ್ತೂರು, ವಯಲಿನ್ ನಲ್ಲಿ ಶ್ರೀ ಮಧುಮುರಳಿ ಮತ್ತೂರು ಪಕ್ಕವಾದ್ಯದಲ್ಲಿ ಸಹಕರಿಸಿದರು. ಆರತಿ ಮಹೇಶ್, ಸರಸ್ವತಿ ನಳಿನಚಂದ್ರ, ವಿನಾಯಕ ಪ್ರಭು ಮತ್ತಿತರರು ಉಪಸ್ಥಿತರಿದ್ದರು.













Leave a Reply