ತೀರ್ಥಹಳ್ಳಿಯಲ್ಲಿ ಜ.12 ರಂದು “ಬುದ್ಧನ ಕಡೆಗೆ ದಲಿತ ಸಂಘರ್ಷ ಸಮಿತಿ ನಡಿಗೆ” – ರಾಜ್ಯ ಮಟ್ಟದ ಜಾಗೃತಿ ಕಾರ್ಯಕ್ರಮ

1002008339 ತೀರ್ಥಹಳ್ಳಿಯಲ್ಲಿ ಜ.12 ರಂದು “ಬುದ್ಧನ ಕಡೆಗೆ ದಲಿತ ಸಂಘರ್ಷ ಸಮಿತಿ ನಡಿಗೆ” - ರಾಜ್ಯ ಮಟ್ಟದ ಜಾಗೃತಿ ಕಾರ್ಯಕ್ರಮ
Spread the love

ಹೊಸನಗರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾಗಿದ್ದ ದಿ. ಲಕ್ಮಿನಾರಾಯಣ ನಾಗವಾರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಜನವರಿ 12ರಂದು ಸೋಮವಾರ ತೀರ್ಥಹಳ್ಳಿಯಲ್ಲಿ ರಾಜ್ಯಮಟ್ಟದ ಜನಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಚಾಲಕರಾದ ನಾಗರಾಜ್ ಅರಳಸುರಳಿ ತಿಳಿಸಿದ್ದಾರೆ.

ಹೊಸನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯ ಬಂಟರ ಭವನದ ಸಭಾಭವನದ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ “ಬುದ್ಧನ ಕಡೆಗೆ ದಲಿತ ಸಂಘರ್ಷ ಸಮಿತಿ ನಡಿಗೆ” ಕಾರ್ಯಕ್ರಮದೊಂದಿಗೆ ಸಮಾವೇಶ ನಡೆಯಲಿದೆ ಎಂದರು.

  ವಿದ್ಯಾರ್ಥಿ ಜೀವನದಲ್ಲೇ ದಮನಿತ-ಶೋಷಿತ ಸಮುದಾಯಗಳ ಪರ ಹೋರಾಟ ಆರಂಭಿಸಿದ್ದ ಲಕ್ಮಿನಾರಾಯಣ ನಾಗವಾರ ಅವರು ತಮ್ಮ ಜೀವನವನ್ನೇ ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ನಾಯಕರು. ಅವರ ಸ್ಮರಣೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

  ಸಮಾವೇಶವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸಲಿದ್ದು, ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆರ್.ಡಿ. ಮಲ್ಲಯ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

‌‌‌‌ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ, ಹೊಸನಗರ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ನಾಗರಾಜ್ ಅರಳಿಸುರಳಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಸಂಚಾಲಕ ಜಯನಗರ ಗುರು, ಮತ್ತಿಮನೆ ಸಂದೇಶ್, ಗಂಗನಕೊಪ್ಪ ನಾರಾಯಣ, ಮತ್ತಿಮನೆ ಚಂದ್ರ, ಸುಬ್ರಹ್ಮಣ್ಯ, ಗಂಗನಕೊಪ್ಪ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *