ಶಿಕಾರಿಪುರ: ರಂಜಾನ್ ದೇಣಿಗೆ ವಿಚಾರವಾಗಿ ಕಲ್ಲು ತೂರಾಟ: 10 ಮಂದಿ ಬಂಧನ

IMG 20260302 WA0017 ಶಿಕಾರಿಪುರ: ರಂಜಾನ್ ದೇಣಿಗೆ ವಿಚಾರವಾಗಿ ಕಲ್ಲು ತೂರಾಟ: 10 ಮಂದಿ ಬಂಧನ
Spread the love

ದೇಣಿಗೆ ಸಂಗ್ರಹಣೆ ಕುರಿತು ಎರಡು ಗುಂಪುಗಳ ಘರ್ಷಣೆ – ಶಿಕಾರಿಪುರ–ಶಿರಾಳಕೊಪ್ಪ ರಸ್ತೆಯಲ್ಲಿ ಸಂಚಾರ ಸ್ಥಗಿತ, ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿ ನಿಯಂತ್ರಣ

ಶಿಕಾರಿಪುರ: ರಂಜಾನ್ ಹಬ್ಬಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಭಾನುವಾರ ಪಟ್ಟಣದ ಗಗ್ರಿ ಪ್ರದೇಶದಲ್ಲಿ ತೀವ್ರ ಘರ್ಷಣೆ ನಡೆದಿದೆ. ಘಟನೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಈ ಸಂಬಂಧ ಪೊಲೀಸರು 10 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಸೀದಿಯಲ್ಲಿ ನಡೆದ ಸಭೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಪ್ರತಿ ಕುಟುಂಬವು ₹1,000 ದೇಣಿಗೆ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಈ ತೀರ್ಮಾನಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತು. ನಂತರ ಎರಡೂ ಗುಂಪುಗಳು ಪರಸ್ಪರ ಕಲ್ಲು, ಕೋಲು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಎಸೆದ ಪರಿಣಾಮ ಪರಿಸ್ಥಿತಿ ನಿಯಂತ್ರಣ ತಪ್ಪಿತು.
ಘಟನೆಯಿಂದ ಶಿಕಾರಿಪುರ–ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ರಸ್ತೆಯುದ್ದಕ್ಕೂ ಕಲ್ಲುಗಳು ಬಿದ್ದಿದ್ದರಿಂದ ವಾಹನ ಸವಾರರು ಆತಂಕಕ್ಕೀಡಾದರು.

ಮಾಹಿತಿ ತಿಳಿದ ತಕ್ಷಣ ಶಿಕಾರಿಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ 10 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎರಡು ಗುಂಪುಗಳ ನಡುವೆ ಪರಸ್ಪರ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಹಿಂಸಾಚಾರ ಮರುಕಳಿಸದಂತೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *