ಗೊಂದಿ ಚಟ್ನಳ್ಳಿಯ ಜಾತ್ರೆಯಲ್ಲಿ ಮೆರೆದ ‘ಜೋಕುಮಾರಸ್ವಾಮಿ’ – ಜನಪದ ರಂಗಪರಂಪರೆಗೆ ಜೀವ ತುಂಬಿದ ಯುವಶಕ್ತಿ’

IMG 20251223 WA0189 ಗೊಂದಿ ಚಟ್ನಳ್ಳಿಯ ಜಾತ್ರೆಯಲ್ಲಿ ಮೆರೆದ ‘ಜೋಕುಮಾರಸ್ವಾಮಿ’ – ಜನಪದ ರಂಗಪರಂಪರೆಗೆ ಜೀವ ತುಂಬಿದ ಯುವಶಕ್ತಿ'
Spread the love

ಶಿವಮೊಗ್ಗ:ನಾಟಕ ಹಾಗೂ ರಂಗಚಟುವಟಿಕೆಗಳು ನಿಧಾನವಾಗಿ ಹಿನ್ನುಗ್ಗುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಜಾತ್ರಾ ಮಹೋತ್ಸವದ ಭಾಗವಾಗಿ ಗೊಂದಿ ಚಟ್ನಳ್ಳಿಯ ಗ್ರಾಮದ ಯುವಕರು ಆಯೋಜಿಸಿದ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ ರಂಗಭೂಮಿಯ ಮೇಲಿನ ಆಶಾಭಾವನೆಯನ್ನು ಮತ್ತೆ ಜೀವಂತಗೊಳಿಸಿತು. ಯುವ ಮನಸ್ಸುಗಳಲ್ಲಿ ರಂಗಪರಂಪರೆಯ ಆಸಕ್ತಿಯನ್ನು ಹೆಚ್ಚು  ಮಾಡುವ ಉದ್ದೇಶದೊಂದಿಗೆ ಇಟ್ಟ ಈ ಪ್ರಯತ್ನ ನಿಜಕ್ಕೂ ಪ್ರೋತ್ಸಾಹಾರ್ಹ ಹೆಜ್ಜೆಯೆಂದರೆ ಅತಿಶಯೋಕ್ತಿ ಅಲ್ಲ.


ಡಾ||ಲವ ಜಿ.ಆರ್. ಅವರ ನಿರ್ದೇಶನದಲ್ಲಿ, ಸಹ್ಯಾದ್ರಿ ಕಲಾ ತಂಡದ ಹವ್ಯಾಸಿ ರಂಗಕಲಾವಿದರ ಶ್ರಮದ ಫಲವಾಗಿ ರೂಪುಗೊಂಡ ಈ ನಾಟಕವು ಡಿಸೆಂಬರ್ 20, 2025ರಂದು, ಶ್ರೀ ಮಹೇಶ್ವರ ಜಾತ್ರಾಸಮಿತಿ ಹಾಗೂ ಸಮುದಾಯ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಗೊಂದಿ ಚಟ್ನಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

img 20251223 wa01904237802484035472567 ಗೊಂದಿ ಚಟ್ನಳ್ಳಿಯ ಜಾತ್ರೆಯಲ್ಲಿ ಮೆರೆದ ‘ಜೋಕುಮಾರಸ್ವಾಮಿ’ – ಜನಪದ ರಂಗಪರಂಪರೆಗೆ ಜೀವ ತುಂಬಿದ ಯುವಶಕ್ತಿ'


ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರರು ರಚಿಸಿದ ‘ಜೋಕುಮಾರಸ್ವಾಮಿ’ ನಾಟಕ 1972ರಲ್ಲಿ ಪ್ರಕಟವಾದರೂ, ಅದರ ಕಥಾವಸ್ತು ಇಂದಿಗೂ ಸಮಕಾಲೀನವೆನಿಸುವಷ್ಟು ಪ್ರಸ್ತುತತೆಯನ್ನು ಹೊಂದಿದೆ. ಜನಪದ ಸಂಸ್ಕೃತಿ, ಸಂಗೀತ, ನಂಬಿಕೆಗಳು ಹಾಗೂ ಸಮಾಜದ ಒಳಹೊಕ್ಕಿರುವ ಶೋಷಣೆ–ದಬ್ಬಾಳಿಕೆಗಳ ಸಂಕೇತಗಳನ್ನು ಹೊತ್ತುಕೊಂಡ ಈ ನಾಟಕ ತಲೆಮಾರುಗಳಾಚೆಗೂ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದೆ.


ನಾಟಕದಲ್ಲಿ ಫಲವತ್ತತೆಯ ಸಂಕೇತವಾಗಿ ಪೂಜಿಸಲ್ಪಡುವ ಜೋಕುಮಾರಸ್ವಾಮಿ, ಹಣ–ಅಧಿಕಾರ–ಬಲದ ಆಧಾರದಲ್ಲಿ ದಬ್ಬಾಳಿಕೆಯ ದಾರಿಯನ್ನು ಹಿಡಿಯುವ ಗೌಡ, ಮಕ್ಕಳಿಗಾಗಿ ಹಂಬಲಿಸುವ ಗೌಡ್ತಿಯ ಹೃದಯಸ್ಪರ್ಶಿ ಸಂವೇದನೆ, ಅವಳಿಗೆ ಬೆಂಬಲವಾಗಿ ನಿಲ್ಲುವ ಊರ ಮಹಿಳೆಯರು ಹಾಗೂ ಅನ್ಯಾಯದ ವಿರುದ್ಧ ಧೈರ್ಯವಾಗಿ ಹೋರಾಡುವ ಬಸಣ್ಯ ಪಾತ್ರಗಳು ಸಮಾಜದ ವಾಸ್ತವ ಚಿತ್ರಣವನ್ನು ಅತ್ಯಂತ ಸ್ಪಷ್ಟವಾಗಿ ತೆರೆದಿಟ್ಟವು. ಪ್ರತೀ ಪಾತ್ರಕ್ಕೂ ಸಮಾನ ಮಹತ್ವ ನೀಡುವ ಮೂಲಕ ಕಲಾವಿದರು ತೋರಿದ ನಿಷ್ಠೆ ನಾಟಕದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿತು.


ಈ ನಾಟಕವನ್ನು ಹವ್ಯಾಸಿ ಕಲಾವಿದರು, ಹೊಸ ಮುಖಗಳು ಹಾಗೂ ವಿದ್ಯಾರ್ಥಿಗಳು ಅಭಿನಯಿಸಿದ್ದರೂ, ಅವರ ಅಭಿನಯದಲ್ಲಿ ಕಂಡುಬಂದ ಆತ್ಮವಿಶ್ವಾಸ ಪ್ರಶಂಸನೀಯವಾಗಿತ್ತು.

   ಒಟ್ಟಾರೆ ನಾಟಕವು ಅತ್ಯಂತ ಸೃಜನಶೀಲ ಹಾಗೂ ಕಲಾತ್ಮಕವಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಯಿತು. ಮಲೆನಾಡಿನ ಕಲಾವಿದರು ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಸ್ವಂತಿಸಿಕೊಂಡು ಪಾತ್ರಗಳಿಗೆ ನ್ಯಾಯ ಒದಗಿಸಿದ ರೀತಿ ನಿರ್ದೇಶಕರು ಹಾಗೂ ತಂಡದ ಶ್ರಮಕ್ಕೆ ಸಾಕ್ಷಿಯಾಗಿದೆ. ಲೈಂಗಿಕತೆ, ಒರಟು ಭಾಷೆ ಹಾಗೂ ತೀಕ್ಷ್ಣ ಸಾಮಾಜಿಕ ವ್ಯಂಗ್ಯಗಳನ್ನು ಒಳಗೊಂಡ ಪಾತ್ರಗಳನ್ನು ಕಲಾವಿದರು ಯಾವುದೇ ಹಿಂಜರಿಕೆಯಿಲ್ಲದೆ ನಿರ್ವಹಿಸಿದ್ದು, ರಂಗಭೂಮಿಯ ಮೇಲಿನ ಅವರ ನಿಷ್ಠೆಯನ್ನು ತೋರಿಸುತ್ತದೆ. ನಟನೆ, ಬೆಳಕು ವಿನ್ಯಾಸ, ಸಂಗೀತ–ವಾದ್ಯ, ನೃತ್ಯ ಎಲ್ಲವೂ ಸಮನ್ವಯಗೊಂಡು ನಾಟಕವು ನೋಡುಗರಿಗೆ ನಿಜಕ್ಕೂ ರಸದೌತಣವಾಗಿ ಪರಿಣಮಿಸಿತು.

ನಾಟಕದ ಅಂತಿಮ ಘಟ್ಟದಲ್ಲಿ ನಿರ್ದೇಶಕರು ನೀಡಿದ ತಿರುವು ವಿಶೇಷ ಗಮನ ಸೆಳೆಯಿತು.  ಹಿಂಸೆಯ ಸಂಕೇತಗಳಾದ ಬಂದೂಕು, ಕೊಡಲಿ, ಕುಡುಗೋಲುಗಳನ್ನು ಸುಡುವ ಮೂಲಕ ಸಮಾಜದಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಮಾನತೆಯ ಆಶಯವನ್ನು ಪ್ರತಿಪಾದಿಸಿದ ಸನ್ನಿವೇಶವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಮೂಡಿಬಂದಿತು. ಈ ದೃಶ್ಯಕ್ಕೆ ದೊರೆತ ಪ್ರೇಕ್ಷಕರ ಭರ್ಜರಿ ಪ್ರತಿಕ್ರಿಯೆ, ನಾಟಕದ ಮೂಲ ಆಶಯಕ್ಕೆ ಹಿಡಿದ ಕನ್ನಡಿಯಂತಿತ್ತು.


ಒಟ್ಟಿನಲ್ಲಿ, ಗೊಂದಿ ಚಟ್ನಳ್ಳಿಯ ಜಾತ್ರೆಯಲ್ಲಿ ಪ್ರದರ್ಶನಗೊಂಡ ‘ಜೋಕುಮಾರಸ್ವಾಮಿ’ ನಾಟಕ ಜನಪದ ರಂಗಭೂಮಿಯ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸ್ಮರಣೀಯ ದಿನವಾಗಿ ಉಳಿಯಿತು.


Spread the love

Leave a Reply

Your email address will not be published. Required fields are marked *