Orange Economy ಮತ್ತು ರಾಷ್ಟ್ರೀಯತೆ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 px 20260219 000147 0000 1 Orange Economy ಮತ್ತು ರಾಷ್ಟ್ರೀಯತೆ
Spread the love

ಡಾ.ರವೀಶ.ಎನ್.ಎಸ್

ಭಾರತದ ಸನಾತನ ಸಂಸ್ಕೃತಿ ಎಂದರೆ ಕೇವಲ ಧಾರ್ಮಿಕ ಆಚರಣೆಗಳ ಸಂಕಲನವಲ್ಲ; ಅದು ದಾರ್ಶನಿಕರು ನೀಡಿರುವ ಸಮಗ್ರ ತತ್ತ್ವಶಾಸ್ತ್ರ.

“ಸನಾತನ” ಎಂದರೆ ಶಾಶ್ವತ—ಕಾಲ ಬದಲಾಗಿದರೂ ಸತ್ಯ, ಧರ್ಮ, ಕರುಣೆ, ಸಹಿಷ್ಣುತೆ ಮತ್ತು ಜ್ಞಾನ ಎಂಬ ಮೌಲ್ಯಗಳು ಬದಲಾಗುವುದಿಲ್ಲ. ವೇದಗಳು, ಉಪನಿಷತ್ತುಗಳು, ರಾಮಾಯಣ–ಮಹಾಭಾರತ, ಪುರಾಣಗಳು, ವಚನ ಸಾಹಿತ್ಯ, ದಾಸರ ಕೀರ್ತನೆಗಳು—ಇವೆಲ್ಲವೂ ಮಾನವ ಜೀವನವನ್ನು ಉನ್ನತಗೊಳಿಸುವ ಜ್ಞಾನಸಂಪತ್ತು. ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಲ್ಲ; ಅವು ಕಲೆ, ಸಂಗೀತ, ನೃತ್ಯ, ವಾಸ್ತುಶಿಲ್ಪ ಮತ್ತು ಶಿಕ್ಷಣದ ಕೇಂದ್ರಗಳು. ಪ್ರಕೃತಿಯೊಂದಿಗಿನ ಸಾಮರಸ್ಯ, ಕುಟುಂಬ ಮೌಲ್ಯಗಳ ಮಹತ್ವ ಮತ್ತು ಆತ್ಮೋನ್ನತಿಯ ದಾರಿಯನ್ನು ತೋರಿಸುವುದು ಸನಾತನ ಸಂಸ್ಕೃತಿಯ ವೈಶಿಷ್ಟ್ಯ. ಇದು ಭೂತಕಾಲದ ಅವಶೇಷವಲ್ಲ; ಅದು ಇಂದಿಗೂ ಉಸಿರಾಡುತ್ತಿರುವ ಜೀವಂತ ಪರಂಪರೆ.

10006928162540164966575142727 Orange Economy ಮತ್ತು ರಾಷ್ಟ್ರೀಯತೆ

ಈ ಪರಂಪರೆಯಲ್ಲೇ ಕೇಸರಿ ಅಥವಾ ಕಿತ್ತಳೆ ಬಣ್ಣಕ್ಕೆ ಅಪಾರ ಮಹತ್ವವಿದೆ. ಕೇಸರಿ ತ್ಯಾಗದ ಸಂಕೇತ, ಜ್ಞಾನೋದಯದ ಸಂಕೇತ, ಆತ್ಮಶುದ್ಧಿಯ ಸಂಕೇತ. ಅಗ್ನಿಯ ಜ್ವಾಲೆಯ ಬಣ್ಣವೂ ಇದೇ—ಅಗ್ನಿ ಅಶುದ್ಧತೆಯನ್ನು ಸುಟ್ಟು ಶುದ್ಧಗೊಳಿಸುವಂತೆ, ಮನುಷ್ಯನ ಜ್ಞಾನ ಅಜ್ಞಾನವನ್ನು ನಿವಾರಿಸಬೇಕು ಎಂಬ ಸಂದೇಶ ನೀಡುತ್ತದೆ.

ಉದಯಕಾಲದ ಸೂರ್ಯನ ಕಿತ್ತಳೆ ಕಿರಣಗಳು ಹೊಸ ಆರಂಭ, ಚೈತನ್ಯ ಮತ್ತು ಆಶೆಯನ್ನು ಸೂಚಿಸುತ್ತವೆ.

ಇದೇ ಮನೋಭಾವ “ಕಿತ್ತಳೆ ಆರ್ಥಿಕತೆ”ಯ ತತ್ತ್ವದ ಮೂಲವಾಗಿದೆ—ಕಲೆ, ವಿನ್ಯಾಸ, ಬೌದ್ಧಿಕ ಆಸ್ತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ ವ್ಯವಸ್ಥೆಯೇ ಕಿತ್ತಳೆ ಆರ್ಥಿಕತೆ (Orange Economy).

ಜ್ಞಾನವು ಮೌಲ್ಯವನ್ನು ಸೃಷ್ಟಿಸಿದಾಗ ಅದು ಆರ್ಥಿಕ ಸಂಪತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಅನಿಮೇಷನ್, ಗೇಮಿಂಗ್, ಡಿಜಿಟಲ್ ಮೀಡಿಯಾ ಮತ್ತು ಕೃತಕ ಬುದ್ಧಿಮತ್ತೆಯೊಂದಿಗೆ ಭಾರತ ತನ್ನ ಸಾಂಸ್ಕೃತಿಕ ಶಕ್ತಿಯನ್ನು ಜಗತ್ತಿಗೆ ತಲುಪಿಸುವ ಯುಗ ಪ್ರಾರಂಭವಾಗಿದೆ.

“ಕಿತ್ತಳೆ ಆರ್ಥಿಕತೆ” ಎಂಬುದು ಸೃಜನಶೀಲ ಆರ್ಥಿಕತೆ (Creative Economy)ಗೆ ಇರುವ ಮತ್ತೊಂದು ಹೆಸರು. ಜಾನ್ ಹೌಕಿನ್ಸ್ (John Howkins) ಈ ಪದವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದರು. ಕಿತ್ತಳೆ ಆರ್ಥಿಕತೆ ಎಂದರೆ ಜ್ಞಾನಾಧಾರಿತ ಸೃಜನಾತ್ಮಕ ವಲಯಗಳು—ಸಿನಿಮಾ, ಸಂಗೀತ, ಅನಿಮೇಷನ್, ಗೇಮಿಂಗ್, ಡಿಜಿಟಲ್ ಮೀಡಿಯಾ, ಫ್ಯಾಷನ್, ಡಿಸೈನ್, ಸಾಹಿತ್ಯ ಇತ್ಯಾದಿಗಳ ಆರ್ಥಿಕ ವ್ಯವಸ್ಥೆ. ಇಲ್ಲಿ ಮೌಲ್ಯ ಸೃಷ್ಟಿ ಭೌತಿಕ ಉತ್ಪನ್ನಗಳಿಂದಲ್ಲ; ವಿಷಯ (content) ಮತ್ತು ಸೃಜನಶೀಲತೆ (Creativity) ಯಿಂದ ಸಿಗುತ್ತದೆ. ಈ ಪರಿಕಲ್ಪನೆಯನ್ನು ಜಾಗತಿಕ ವೇದಿಕೆಯಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ನಡೆದ WAVES 2025 ಶೃಂಗಸಭೆಯ ನಾಯಕತ್ವ ವಹಿಸಿದ್ದ ಭಾರತವು ತನ್ನ ಸೃಜನಾತ್ಮಕ (Creative) ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ.

ವಿವಿಧ ಅಧ್ಯಯನಗಳ ಪ್ರಕಾರ ಭಾರತದ Creator Economy ವೇಗವಾಗಿ ಬೆಳೆಯುತ್ತಿದೆ. ಇದು ಕೇವಲ ಮನರಂಜನಾ ಕ್ಷೇತ್ರವಲ್ಲ; ಉದ್ಯೋಗ ಸೃಷ್ಟಿ, ಸ್ಟಾರ್ಟ್‌ಅಪ್ ವೃದ್ಧಿ ಮತ್ತು ವಿದೇಶಿ ವಿನಿಮಯ ಆದಾಯವನ್ನು ಹೆಚ್ಚಿಸುವ ಪ್ರಮುಖ ವಲಯವಾಗಿದೆ.

ಭಾರತದ ಬಜೆಟ್ 2026ರಲ್ಲಿ ಸೃಜನಶೀಲ ವಲಯ, ಡಿಜಿಟಲ್ ವಿಷಯ ನಿರ್ಮಾಣ, ಅನಿಮೇಷನ್, ಗೇಮಿಂಗ್, AI ಮತ್ತು ಸ್ಟಾರ್ಟ್‌ಅಪ್ ಪರಿಸರಕ್ಕೆ ನೀಡಲಾದ ಒತ್ತುವರಿಯು ಸ್ಪಷ್ಟ ಸಂದೇಶ ನೀಡುತ್ತದೆ—ಭವಿಷ್ಯದ ಉದ್ಯೋಗಗಳು ಕೇವಲ ಕಾರ್ಖಾನೆಗಳಲ್ಲಿ ಹುಟ್ಟುವುದಿಲ್ಲ; ಅವು ಕಲ್ಪನೆ ಮತ್ತು ಸೃಜನಶೀಲತೆಯಲ್ಲಿ ಹುಟ್ಟುತ್ತವೆ. ಕಿತ್ತಳೆ ಆರ್ಥಿಕತೆಯ ದೊಡ್ಡ ಶಕ್ತಿ ಎಂದರೆ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಒಂದು ಮೊಬೈಲ್, ಒಂದು ಲ್ಯಾಪ್‌ಟಾಪ್ ಮತ್ತು ಇಂಟರ್‌ನೆಟ್ ಸಂಪರ್ಕ ಇದ್ದರೆ ಸಾಕು. “Work from Home” ಮಾದರಿಯಲ್ಲಿ ಗ್ರಾಮೀಣ ಯುವಕರು, ಮಹಿಳೆಯರು ಮತ್ತು ಸ್ಥಳೀಯ ಕಲಾವಿದರು ಜಾಗತಿಕ ಮಾರುಕಟ್ಟೆಗೆ ತಲುಪಬಹುದು.

web ads 20260219 003828 00007134414685090812644 Orange Economy ಮತ್ತು ರಾಷ್ಟ್ರೀಯತೆ


ಸ್ಥಳೀಯ ಕಥೆಗಾರರು ತಮ್ಮ ಹಳ್ಳಿಯ ಪುರಾಣ, ಇತಿಹಾಸ ಮತ್ತು ಜನಪದ ಕಥೆಗಳನ್ನು YouTube, Podcast ಅಥವಾ OTT ವೇದಿಕೆಗಳ ಮೂಲಕ ಹಂಚಬಹುದು. ಗೃಹಿಣಿಯರು ಸ್ವಚ್ಛತೆ, ಪೌಷ್ಟಿಕ ಆಹಾರ, ಸಾಂಪ್ರದಾಯಿಕ ಅಡುಗೆ ಪದ್ಧತಿಗಳು ಮತ್ತು ಆಯುರ್ವೇದ ವೈದ್ಯಕೀಯ ಪದ್ಧತಿಯ ಬಗ್ಗೆ ವಿಷಯ ನಿರ್ಮಾಣ ಮಾಡಿ ಜಗತ್ತಿಗೆ ಪರಿಚಯಿಸಬಹುದು. Hygiene Food ಕ್ಷೇತ್ರದಲ್ಲಿ ಆರೋಗ್ಯಕರ ಭಾರತೀಯ ಪಾಕಶೈಲಿಗೆ ದೊಡ್ಡ ಅವಕಾಶವಿದೆ. ಭಾಷಾ ತಜ್ಞರು ಮತ್ತು ವಿದ್ಯಾರ್ಥಿಗಳು AI ಸಹಾಯದಿಂದ ಕನ್ನಡದ ವಚನಗಳು, ದಾಸ ಸಾಹಿತ್ಯ ಮತ್ತು ಪುರಾಣ ಕಥೆಗಳನ್ನು ಜಗತ್ತಿನ ವಿವಿಧ ಭಾಷೆಗಳಿಗೆ ಅನುವಾದಿಸಿ ಜಾಗತಿಕ ಪ್ರೇಕ್ಷಕರಿಗೆ ತಲುಪಿಸಬಹುದು. “Vocal for Local” ಎಂಬ ತತ್ವ ಇಲ್ಲಿ ಆರ್ಥಿಕ ಶಕ್ತಿಯಾಗುತ್ತದೆ.

ನಮ್ಮ ಸಂಸ್ಕೃತಿಯ ಕಥೆಗಳು ಮಹತ್ತರ ಬೌದ್ಧಿಕ ಆಸ್ತಿಗಳು. ರಾಮಾಯಣ ಮತ್ತು ಮಹಾಭಾರತದ ವೀರಗಾಥೆಗಳನ್ನು ಆಧರಿಸಿ ವಿಶ್ವದರ್ಜೆಯ ಗೇಮ್‌ಗಳನ್ನು ರೂಪಿಸಬಹುದು. ಜಪಾನ್ ತನ್ನ ಅನಿಮೆ ಮೂಲಕ ಸಂಸ್ಕೃತಿಯನ್ನು ಜಗತ್ತಿಗೆ ತಲುಪಿಸಿದಂತೆ, ಭಾರತವೂ ತನ್ನ ಪುರಾಣ ಪಾತ್ರಗಳನ್ನು ಅಂತರಾಷ್ಟ್ರೀಯ ಮಟ್ಟದ ಅನಿಮೇಷನ್ ರೂಪದಲ್ಲಿ ಮಕ್ಕಳ ಮುಂದೆ ಇಡಬಹುದು. ಇಂದಿನ ಮಕ್ಕಳ ಪರದೆಗಳಲ್ಲಿ BGMI, Roblox, Minecraft ಮುಂತಾದ ವಿದೇಶಿ ಗೇಮ್‌ಗಳು ಮೇಲುಗೈ ಸಾಧಿಸಿವೆ. ಹಿಂಸಾತ್ಮಕ ವಿಷಯ ಮತ್ತು ಅತಿಯಾದ ಸ್ಕ್ರೀನ್ ಸಮಯವು ಮಕ್ಕಳ ಮನೋವೈಜ್ಞಾನಿಕ ಆರೋಗ್ಯಕ್ಕೂ ಪರಿಣಾಮ ಬೀರುತ್ತಿದೆ. ಇದರ ಬದಲಿಗೆ ಪಂಚತಂತ್ರ, ಹಿತೋಪದೇಶ, ಕಥಾಸರಿತ್ಸಾಗರಗಳ ಆಧಾರಿತ ಅನಿಮೇಷನ್ ಮತ್ತು ಗೇಮ್‌ಗಳು ಬಂದರೆ, ಮನರಂಜನೆಯ ಜೊತೆಗೆ ಮೌಲ್ಯ ಶಿಕ್ಷಣವೂ ಸಾಧ್ಯ. ಮಕ್ಕಳ ಹೀರೋಗಳು ನಮ್ಮ ಸಂಸ್ಕೃತಿಯಿಂದ ಬಂದಾಗ ಮಾತ್ರ ಅವರು ಮೌಲ್ಯಪೂರ್ಣ ಚಿಂತನೆಗಳೊಂದಿಗೆ ಬೆಳೆಯುತ್ತಾರೆ.

10008559968542218745158689783 Orange Economy ಮತ್ತು ರಾಷ್ಟ್ರೀಯತೆ

ವಿದ್ಯಾರ್ಥಿಗಳು ತಮ್ಮ ಓದಿನ ನಡುವೆ ಪ್ರತಿದಿನ ಸ್ವಲ್ಪ ಸಮಯ ಮೀಸಲಿಟ್ಟು ಪುರಾಣ ಕಥೆಗಳ ಸರಳ ವಿವರಣೆಗಳನ್ನು ವಿಡಿಯೋ ರೂಪದಲ್ಲಿ ಹಂಚಬಹುದು; ವಚನಗಳ ಅರ್ಥವನ್ನು ತಮ್ಮ ಭಾಷೆಯಲ್ಲಿ ವಿವರಿಸಬಹುದು; ಸ್ಥಳೀಯ ಇತಿಹಾಸದ ಕಥನಗಳನ್ನು ದಾಖಲಿಸಬಹುದು. ಮಹಿಳೆಯರು ಮನೆಯ ಕಾರ್ಯಗಳ ಮಧ್ಯೆ ತಮ್ಮ ಅಡುಗೆ ಪರಂಪರೆ ಮತ್ತು ಜಾನಪದ ಗಾಯನಗಳನ್ನು ಡಿಜಿಟಲ್ ರೂಪದಲ್ಲಿ ಹಂಚಬಹುದು. ಸ್ಥಳೀಯ ಕಲಾವಿದರು ತಮ್ಮ ಯಕ್ಷಗಾನ, ಹರಿಕಥೆ, ಕೀರ್ತನೆಗಳನ್ನು ದಾಖಲಿಸಿ ಜಗತ್ತಿಗೆ ತಲುಪಿಸಬಹುದು. ಒಂದು ಮೊಬೈಲ್ ಸಾಧನ, ಸ್ವಲ್ಪ ಶ್ರಮ ಮತ್ತು ನಿರಂತರ ಪ್ರಯತ್ನ ಸಾಕು.

ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ನಿಯಮಿತ ಫಾರ್ಮಾಟ್‌ನಿಂದ ಹೊರಬಂದು ರಾಷ್ಟ್ರ-ಧರ್ಮ ತಳಹದಿಯ ಮೇಲೆ ಮೌಲ್ಯಯುತ ಕಂಟೆಂಟ್ ಸೃಷ್ಟಿಸಬಹುದು. ಕ್ರಿಯಾಶೀಲ ಕಂಟೆಂಟ್‌ಗಳಿಗೆ ಹಾಕಿದ ಬಂಡವಾಳ ಎಂದೂ ನಷ್ಟವಾಗುವುದಿಲ್ಲ.

ಭಾರತೀಯ ಜ್ಞಾನ ಪರಂಪರೆಯ ಕಂಟೆಂಟ್‌ಗಳ ನಿರ್ಮಾಣ—ಇದು ಕೇವಲ ಒಂದು ಆಲೋಚನೆ ಅಲ್ಲ; ಇದು ಒಂದು ಚಳವಳಿ ಆಗಬೇಕು. ಭಾರತದ ವೈಭವಮಯ ಇತಿಹಾಸ, ಸನಾತನ ಪರಂಪರೆ ಮತ್ತು ಅಪಾರ ಸಾಂಸ್ಕೃತಿಕ ಸಂಪತ್ತನ್ನು ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿ ಪ್ರದರ್ಶಿಸುವ ಹೊಣೆಗಾರಿಕೆ ಇಂದಿನ ಕಂಟೆಂಟ್ ಕ್ರಿಯೇಟರ್‌ಗಳ ಮೇಲಿದೆ. ನಮ್ಮ ಇತಿಹಾಸವು ಕೇವಲ ದಿನಾಂಕಗಳ ಸರಮಾಲೆ ಅಲ್ಲ; ಅದು ವಿಜ್ಞಾನ, ತತ್ವಜ್ಞಾನ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಆಧ್ಯಾತ್ಮಿಕತೆಯ ಮಹಾಸಾಗರ. ತಕ್ಷಶಿಲೆ ಮತ್ತು ನಾಳಂದೆಯಂತಹ ವಿಶ್ವವಿದ್ಯಾಲಯಗಳ ಪರಂಪರೆ, ವೇದ-ಉಪನಿಷತ್‌ಗಳ ತಾತ್ವಿಕ ಆಳ, ದೇವಸ್ಥಾನ ವಾಸ್ತುಶಿಲ್ಪದ ಅದ್ಭುತ ರಚನೆಗಳು, ಯೋಗ ಮತ್ತು ಆಯುರ್ವೇದದ ವೈಜ್ಞಾನಿಕ ಮೌಲ್ಯ—ಇವೆಲ್ಲವೂ ಜಗತ್ತಿಗೆ ಪರಿಚಯವಾಗಬೇಕಾದ ವಿಷಯಗಳು.

ಭಾರತದ ಪುರಾಣ ಮತ್ತು ಇತಿಹಾಸದ ಘಟನೆಗಳನ್ನು ಅಂತರಾಷ್ಟ್ರೀಯ ಮಟ್ಟದ ಕಥನ ಶೈಲಿಯಲ್ಲಿ ಪ್ರಸ್ತುತಪಡಿಸಬಹುದು. ದೇವಸ್ಥಾನಗಳ ವಾಸ್ತುಶಿಲ್ಪದ ಹಿಂದೆ ಅಡಗಿರುವ ಗಣಿತ ಮತ್ತು ಖಗೋಳ ವಿಜ್ಞಾನವನ್ನು ವಿವರಿಸಬಹುದು. ಯೋಗ, ಆಯುರ್ವೇದ ಮತ್ತು ಭಾರತೀಯ ಜೀವನಶೈಲಿಯ ವೈಜ್ಞಾನಿಕ ಅಂಶಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಬಹುದು. ಸ್ಥಳೀಯ ಜನಪದ ಕಥೆಗಳನ್ನು ಅನುವಾದಿಸಿ ಜಗತ್ತಿನ ಭಾಷೆಗಳಲ್ಲಿ ಹಂಚಬಹುದು. ಮಕ್ಕಳಿಗಾಗಿ ಮೌಲ್ಯಾಧಾರಿತ ಅನಿಮೇಷನ್ ಮತ್ತು ಗೇಮ್‌ಗಳನ್ನು ರಚಿಸಬಹುದು.



ಜಪಾನ್ ಅನಿಮೆ ಸೀರಿಸ್ ಮೂಲಕ ತನ್ನ ಸಂಸ್ಕೃತಿಯನ್ನು ಅನಿಮೇಷನ್ ಮೂಲಕ ಜಗತ್ತಿಗೆ ತಲುಪಿಸಿದೆ; ಕೊರಿಯಾ ತನ್ನ ಕಥೆಗಳ ಮೂಲಕ ಜಾಗತಿಕ ಮನರಂಜನಾ ಕ್ಷೇತ್ರದಲ್ಲಿ ಸ್ಥಾನ ಪಡೆದಿದೆ. ಹಾಗಿದ್ದಾಗ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಭಾರತ ತನ್ನ ಕಥೆಗಳನ್ನು ಜಗತ್ತಿಗೆ ತಲುಪಿಸಬಾರದೆ?

ಕಿತ್ತಳೆ ಆರ್ಥಿಕತೆ ಕೇವಲ ಆದಾಯದ ಸಾಧನವಲ್ಲ; ಅದು ಆತ್ಮಗೌರವದ ಅಭಿವ್ಯಕ್ತಿ. ಪ್ರತಿಯೊಂದು ಮನೆಯೂ ಒಂದು ಕಲಾಕೇಂದ್ರವಾಗಬಹುದು. ಪ್ರತಿಯೊಂದು ಹಳ್ಳಿಯೂ ಒಂದು ಜಾಗತಿಕ ಕಥಾ ವಿಶ್ವವಾಗಬಹುದು. ಸನಾತನ ಸಂಸ್ಕೃತಿಯ ಆಳ ಮತ್ತು ಕಿತ್ತಳೆ ಆರ್ಥಿಕತೆಯ ಅವಕಾಶಗಳು ಒಂದಾದಾಗ ಅದು ಕೇವಲ ಆರ್ಥಿಕ ಬೆಳವಣಿಗೆಯಲ್ಲ—ಅದು ರಾಷ್ಟ್ರೀಯ ಆತ್ಮಜಾಗೃತಿ.

ಕೇಂದ್ರ ಬಜೆಟ್ 2026 ಕಿತ್ತಳೆ ಆರ್ಥಿಕತೆಯ ಬೆಳವಣಿಗೆಗೆ ನೀಡಿರುವ ಮಹತ್ವವು ಜಾಗತಿಕ ಮಾರುಕಟ್ಟೆಗೆ ನೀಡಿದ ಸೂಕ್ಷ್ಮ ಮತ್ತು ಸ್ಪಷ್ಟ ಸಂಕೇತವೂ ಹೌದು. ಭಾರತ ಕೇವಲ ಉತ್ಪಾದನಾ ಕೇಂದ್ರವಲ್ಲ; ಅದು Intellectual Property Hub, Creative Content Powerhouse ಮತ್ತು Digital Innovation Leader ಆಗಲು ಸಜ್ಜಾಗಿದೆ ಎಂಬ ಸಂದೇಶವನ್ನು ನೀಡಿದೆ. ಜಾಗತಿಕ ಹೂಡಿಕೆದಾರರಿಗೆ ಇದು ಒಂದು ಮುಕ್ತ ಆಹ್ವಾನ—ಭಾರತದಲ್ಲಿ ಕೇವಲ ಮಾನವ ಸಂಪನ್ಮೂಲವಷ್ಟೇ ಇಲ್ಲ, ಅಪಾರ ಸಾಂಸ್ಕೃತಿಕ ಬಂಡವಾಳ ಮತ್ತು ಕಥನಶಕ್ತಿ ಕೂಡ ಇದೆ ಎಂಬುದನ್ನು ಜಗತ್ತಿಗೆ ಸಾರಿದಂತಾಗಿದೆ.

ಇದು ಕೇವಲ ಮನರಂಜನೆಯ ಸ್ಪರ್ಧೆಯಲ್ಲ; ಇದು ನರೇಟಿವ್‌ಗಳ ಯುದ್ಧ. ಭಾರತವು ತನ್ನ ಕಥೆಗಳನ್ನು, ತನ್ನ ಜ್ಞಾನವನ್ನು ಮತ್ತು ತನ್ನ ಸೃಜನಶೀಲತೆಯನ್ನು, ಶ್ರೀಮಂತ ಸಂಸ್ಕೃತಿಯನ್ನು ಜಗತ್ತು ಅರ್ಥಮಾಡಿಕೊಳ್ಳುವ ರೂಪದಲ್ಲಿ ಕೊಡಲು ಸಿದ್ಧವಾಗಿದೆ. ಕಿತ್ತಳೆ ಆರ್ಥಿಕತೆಯು ಭಾರತದ ಹೊಸ ಭವಿಷ್ಯ ಬರೆಯಲು ವೇದಿಕೆ ಸಿದ್ಧಪಡಿಸಲಿದೆ. ಬಾಲ ಭೀಮಸೇನರು,
ಬಾಲ ಹನುಮರ ಸಾಹಸಗಾಥೆಗಳು ಜಗದಗಲ ವಿಸ್ತಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ನಮ್ಮ ಕಥೆಗಳನ್ನು ನಾವೇ ಹೇಳಲಿಲ್ಲವಾದರೆ ಬೇರೆಯವರು ನಮ್ಮ ಕಥೆಯನ್ನು ಅಪೂರ್ಣವಾಗಿಯೋ ಅಥವಾ ತಪ್ಪಾಗಿ ಹೇಳುತ್ತಾರೆ.

ಬನ್ನಿ, ನಮ್ಮ ಕಂಟೆಂಟ್‌ಗಳಿಗೆ ನಾವೇ ಕ್ರಿಯೇಟರ್ ಆಗುವ,ನಮ್ಮ ದೇಶದ ಸೃಜನಶೀಲ ಸಾಹಿತ್ಯಕ್ಕೆ ಜಾಗತಿಕ ಮೌಲ್ಯ ಸೃಷ್ಟಿಸುವ.

ಡಾ.ರವೀಶ.ಎನ್.ಎಸ್
9538551025

#EconomyExplained  #EconomyNews


Spread the love

Leave a Reply

Your email address will not be published. Required fields are marked *