ನಮ್ಮ ಗುರುಗಳು, ಹಿರಿಯರು, ನಮ್ಮ ಊರಿನವರು ಎದುರಾದಾಗಲೆಲ್ಲ ಗೌರವದಿಂದ ನಮಸ್ಕರಿಸೋಣ.
ಇದು ಕಿವಿಮಾತಲ್ಲ -ರವಿಮಾತು🌄
ನಾವು ಪ್ರತಿದಿನ “ಹೊಸ ವರ್ಷದ ಸಂಕಲ್ಪ” ಎಂದು ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಆರೋಗ್ಯ, ಹಣ, ವೃತ್ತಿ, ಸಾಧನೆ -ಎಲ್ಲದರ ಬಗ್ಗೆ ಯೋಚಿಸುತ್ತೇವೆ. ಆದರೆ ನಮ್ಮ ಬದುಕಿಗೆ ದಾರಿ ತೋರಿದ ಹಿರಿಯರನ್ನು ಗೌರವಿಸುವುದು, ಅವರ ಮುಂದೆ ತಲೆಬಾಗುವುದು, ನಮಸ್ಕರಿಸುವುದು -ಇವುಗಳನ್ನು ಸಂಕಲ್ಪವಾಗಿ ಎಷ್ಟು ಬಾರಿ ಸ್ವೀಕರಿಸುತ್ತೇವೆ? ಮಾನವೀಯ ಮೌಲ್ಯಗಳೇ ನಮ್ಮ ವ್ಯಕ್ತಿತ್ವದ ಅಸಲಿ ಆಧಾರ ಎಂಬುದನ್ನು ನಾವು ಮರೆಯುತ್ತಾ ಹೋಗುತ್ತಿದ್ದೇವೇ ಎಂಬ ಪ್ರಶ್ನೆ ಇಂದು ಅಗತ್ಯವಾಗಿ ಕೇಳಬೇಕಾಗಿದೆ.
ನಮಗೆ ಪಾಠ ಹೇಳಿದ ಗುರುಗಳು, ನಮ್ಮನ್ನು ಬೆಳೆಸಿದ ಸಂಬಂಧಿಕರು, ದೂರದ ಊರಿಗೆ ಹೋದಾಗ ಅಕಸ್ಮಾತ್ತಾಗಿ ಎದುರಾದ ನಮ್ಮದೇ ಊರಿನವರು ಇವರೆಲ್ಲರೂ ನಮ್ಮ ಬದುಕಿನ ಮೌನ ಸಾಕ್ಷಿಗಳು. ಅವರಲ್ಲಿ ಕೆಲವರು ನಮ್ಮನ್ನು ಹೆಸರಿನಿಂದಲೇ ಗುರುತಿಸುತ್ತಾರೆ, ಇನ್ನೂ ಕೆಲವರು ನಮ್ಮ ನಡವಳಿಕೆಯಿಂದಲೇ ನಮ್ಮ ಕುಟುಂಬವನ್ನು ಅಳೆಯುತ್ತಾರೆ. ಇಂತಹ ಹಿರಿಯರನ್ನು ಕಂಡಾಗ ಒಂದು ನಗು, ಒಂದು ನಮಸ್ಕಾರ, ಒಂದು ಗೌರವಪೂರ್ಣ ಮಾತು ಇವೇ ನಮ್ಮ ಸಂಸ್ಕೃತಿಯ ನಿಜವಾದ ಗುರುತು. ವಯಸ್ಸಿನಲ್ಲಿ ಹಿರಿಯರಾಗಿದ್ದಾರೆಂಬ ಒಂದೇ ಕಾರಣವೂ ಅವರಿಗೆ ಮರ್ಯಾದೆ ಸಲ್ಲಿಸಲು ಸಾಕು ಅಲ್ಲವೇ?
ವಯಸ್ಸು ಎಂದರೆ ಕೇವಲ ಸಂಖ್ಯೆ ಅಲ್ಲ. ಅದು ಅನುಭವದ ಸಂಗ್ರಹ, ಬದುಕಿನ ಪಾಠಗಳ ಪೆಟ್ಟಿಗೆ. ಹಿರಿಯರು ನಡೆದ ದಾರಿಯೇ ನಮ್ಮ ದಾರಿಯಾಗಿದೆ. ಅವರನ್ನು ಗೌರವಿಸುವುದು ಕೇವಲ ವ್ಯಕ್ತಿಗತ ಶಿಷ್ಟಾಚಾರವಲ್ಲ; ಅದು ನಮ್ಮ ಸಂಸ್ಕೃತಿಯ ನಿರಂತರತೆಯ ಸಂಕೇತ.
ಇಂದಿನ ವೇಗದ ಬದುಕಿನಲ್ಲಿ, ಮೊಬೈಲ್ ಪರದೆಯೊಳಗೆ ಮುಳುಗಿ, ಎದುರಿಗೆ ನಿಂತಿರುವ ಹಿರಿಯರನ್ನು ಗಮನಿಸದೇ ಮುಂದೆ ಸಾಗುವ ಸ್ಥಿತಿ ಹೆಚ್ಚಾಗಿದೆ. ಆದರೆ ಒಂದು ಕ್ಷಣ ನಿಂತು, ಕಣ್ಣೆತ್ತಿ ನೋಡಿ, “ನಮಸ್ಕಾರ” ಎನ್ನುವ ಆ ಒಂದು ಪದ ಅವರ ದಿನವನ್ನೇ ಬೆಳಗಿಸಬಲ್ಲದು ಎಂಬುದನ್ನು ಮರೆಯಬಾರದು.
ಆದುದರಿಂದ ಈ ಹೊಸ ಕ್ಯಾಲೆಂಡರ್ ವರ್ಷಕ್ಕೆ ಒಂದು ಸಣ್ಣ ಅರ್ಥಪೂರ್ಣ ಸಂಕಲ್ಪ ಮಾಡೋಣ.ನಮ್ಮ ಗುರುಗಳು, ಹಿರಿಯರು, ನಮ್ಮ ಊರಿನವರು ಎದುರಾದಾಗಲೆಲ್ಲ ಗೌರವದಿಂದ ನಮಸ್ಕರಿಸೋಣ. ಇದು ದೊಡ್ಡ ಸಾಧನೆ ಅಲ್ಲ, ಆದರೆ ಮನುಷ್ಯತ್ವವನ್ನು ಉಳಿಸುವ ಮಹತ್ತರ ನಡೆ.














Leave a Reply