ಕೋಣಂದೂರು ರಾಷ್ಟ್ರೀಯ ವಸತಿ ಶಾಲೆಯ ಕೆಲವು ವಿದ್ಯಾರ್ಥಿಗಳು ಅಸ್ವಸ್ಥ|ವಿದ್ಯಾರ್ಥಿಗಳ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ – ಡಿಹೆಚ್‌ಒ

Add a heading 20260725 180144 0000 ಕೋಣಂದೂರು ರಾಷ್ಟ್ರೀಯ ವಸತಿ ಶಾಲೆಯ ಕೆಲವು ವಿದ್ಯಾರ್ಥಿಗಳು ಅಸ್ವಸ್ಥ|ವಿದ್ಯಾರ್ಥಿಗಳ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ - ಡಿಹೆಚ್‌ಒ
Spread the love

ಕೋಣಂದೂರು : ಎನ್‌ಆರ್‌ಎಸ್ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿ ಶುಕ್ರವಾರ ರಾತ್ರಿ ಊಟ ಸೇವಿಸಿದ ಬಳಿಕ ಕೆಲ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ವಿದ್ಯಾರ್ಥಿಗಳಲ್ಲಿ ವಾಂತಿ, ಹೊಟ್ಟೆನೋವು ಸೇರಿದಂತೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೊದಲು ಕೋಣಂದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲ ವಿದ್ಯಾರ್ಥಿಗಳನ್ನು ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ಆಸ್ಪತ್ರೆಗೆ ಕರೆತರಲಾಯಿತು.

ಆಸ್ಪತ್ರೆಯಲ್ಲಿ ವೈದ್ಯರು ತಕ್ಷಣವೇ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಆರಂಭಿಸಿದರು. ನಂತರ ಪೋಷಕರ ಮನವಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಸುಮಾರು 8-10 ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ವೈದ್ಯಕೀಯ ಮೇಲ್ವಿಚಾರಣೆಗಾಗಿ ಸ್ಥಳಾಂತರಿಸಲಾಯಿತು.

ಈ ವೇಳೆ ತೀರ್ಥಹಳ್ಳಿಯ ಮಕ್ಕಳ ತಜ್ಞ ವೈದ್ಯರಾದ ಡಾ. ಸುಪ್ರೀತ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಒದಗಿಸಿದರು.

ಪ್ರಸ್ತುತ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕಪಡುವಂತಹ ಯಾವುದೇ ಗಂಭೀರ ಪರಿಸ್ಥಿತಿ ಇಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಹೆಚ್.ಓ ಡಾ. ನಟರಾಜ್ ಅವರು ಕೋಣಂದೂರು ಎನ್‌ಆರ್‌ಎಸ್ ವಿದ್ಯಾಸಂಸ್ಥೆಯ ವಸತಿ ನಿಲಯದ 8 – 10 ಮಕ್ಕಳಲ್ಲಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದಾಖಲಾದ ತಕ್ಷಣ ವೈದ್ಯಕೀಯ ತಂಡವನ್ನು ನಿಯೋಜಿಸಿ ಅಗತ್ಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗಿದೆ. ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ರೀತಿಯ ಅಪಾಯದ ಪರಿಸ್ಥಿತಿ ಇಲ್ಲ. ಎಲ್ಲರೂ ಸುರಕ್ಷಿತರಾಗಿದ್ದು, ಪ್ರಸ್ತುತ 4 ವಿದ್ಯಾರ್ಥಿಗಳು ಮಾತ್ರ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಇನ್ನುಳಿದವರು ಡಿಸ್ಚಾರ್ಜ್ ಆಗಿದ್ದಾರೆ ಅವರು ಸಹ ಆರೋಗ್ಯವಾಗಿದ್ದಾರೆ ಎಂದರು.

ವಿದ್ಯಾರ್ಥಿಗಳ ದಿಢೀರ್ ಅಸ್ವಸ್ಥತೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಆಹಾರದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕವಷ್ಟೇ ಕಾರಣ ಬಹಿರಂಗವಾಗಲಿದೆ. ಅಲ್ಲಿಯವರೆಗೆ ಆರೋಗ್ಯ ಇಲಾಖೆ ಸೂಚಿಸಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಶಾಲಾ ಆಡಳಿತಕ್ಕೆ ನಿರ್ದೇಶನ ನೀಡಲಾಗಿದ್ದು, ಶಾಲೆಯಲ್ಲಿನ ಪರಿಸ್ಥಿತಿಗಳು ಎಂದಿನಂತೆ ಸಹಜ ಸ್ಥಿತಿಯತ್ತ ಮರಳಿದೆ.

Leave a Reply

Your email address will not be published. Required fields are marked *